ಬೆಂಗಳೂರು: “ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಿ ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ,” ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆ. ಅವರಿಂದಲೇ ಈ ಸರ್ಕಾರ ಮುಂದುವರೆಯಲು ಅವಕಾಶವಾಗಿದೆ,” ಎಂದು ತಿಳಿಸಿದರು.
ಇದಕ್ಕೂ ಮೊದಲು ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪರವರ 117ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಸೋತವರು ಮತ್ತು ಚುನಾವಣೆಗೆ ಸ್ಪರ್ಧಿಸದವರ ಕಥೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ರೋಷನ್ ಬೇಗ್ ಮತ್ತು ಆರ್. ಶಂಕರ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇನ್ನು ಸೋಮವಾರದ ಫಲಿತಾಂಶದಲ್ಲಿ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸೋತಿದ್ದಾರೆ. ಇವರನ್ನೆಲ್ಲಾ ಮೇಲ್ಮನೆಗೆ ನೇಮಕ ಮಾಡಲು ಸದ್ಯ ಯಾವುದೇ ಹುದ್ದೆಗಳು ಖಾಲಿಯೂ ಇಲ್ಲ.
ಇನ್ನು ಇವರುಗಳ ಅನರ್ಹತೆ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿಯೂ ಮತ್ತೊಮ್ಮೆ ವಿಧಾನ ಮಂಡಲವನ್ನು ಪ್ರವೇಶಿಸುವವರೆಗೆ ಯಾವುದೇ ಲಾಭ ದಾಯಕ ಹುದ್ದೆಗಳನ್ನು ಅನರ್ಹ ಶಾಸಕರು ಹೊಂದುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಇವರಿಗೆ ನೇರವಾಗಿ ಸಚಿವ ಸ್ಥಾನ ನೀಡಲೂ ಬರುವುದಿಲ್ಲ. ಇವರನ್ನು ಬಿಜೆಪಿ ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.