ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಯಾಕೆ?

ಬೆಂಗಳೂರು: ಕಳೆದ ಬಾರಿಯ ಉಪಚುನಾವಣೆಗೆ ಮುನ್ನ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿತ್ತು. ಪಕ್ಷದೊಳಗೂ ಕೂಡ ಶ್ರೀರಾಮುಲುಗೆ ಡಿಸಿಎಂ ಭಾಗ್ಯ ಕರುಣಿಸಲು ಬೆಂಬಲವಿತ್ತು. ಆದರೆ, ಚುನಾವಣೆ ಬಳಿಕ ಬಿಜೆಪಿಗೆ ಅಧಿಕಾರ ಸಿಗಲಿಲ್ಲ. ಕಾಂಗ್ರೆಸ್ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಳಿಕ ಮೈತ್ರಿ ಪಾಳಯದಿಂದ 17 ಶಾಸಕರು ರಾಜೀನಾಮೆ ನೀಡುವುದರೊಂದಿಗೆ ಮೈತ್ರಿ ಸರ್ಕಾರ ಬಿದ್ದುಹೋಗಿ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗಲೂ ಕೂಡ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಖಚಿತವೆಂಬ ಮಾತುಗಳು ಕೇಳಿಬಂದವು. ಅಚ್ಚರಿ ಎಂದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲೇ ಇಲ್ಲ.

ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೈತಪ್ಪಲು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಯೇ ಕಾರಣ ಎಂಬುದು ಬಿಜೆಪಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಆಪರೇಷನ್ ಕಮಲದ ಮೂಲ ಬಿಂದುವೇ ರಮೇಶ್ ಜಾರಕಿಹೊಳಿ. ಮೈತ್ರಿಪಕ್ಷಗಳಿಂದ ಶಾಸಕರನ್ನು ಒಗ್ಗೂಡಿಸಲು ಅವರೇ ಮುಂದಾಳತ್ವ ವಹಿಸಿದ್ದರು. ಈ ಕಾರ್ಯಕ್ಕಾಗಿ ರಮೇಶ್ ಜಾರಕಿಹೊಳಿ ಅವರು ಬಿಎಸ್​ವೈ ಸಂಪುಟದಲ್ಲಿ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿದ್ದರು.

ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಇಬ್ಬರೂ ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಮುಖಂಡರೇ ಅಗಿದ್ದಾರೆ. ಇಬ್ಬರಿಗೂ ಡಿಸಿಎಂ ಹುದ್ದೆ ನೀಡಲು ಅಸಾಧ್ಯ. ಬಿಎಸ್​ವೈ ಇದಕ್ಕೆ ಒಪ್ಪಿದರೂ ಹೈಮಾಂಡ್​ನಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇರಲಿಲ್ಲ. ರಮೇಶ್ ಜಾರಕಿಹೊಳಿಗೆ ಕೊಟ್ಟ ಮಾತನ್ನು ಮೀರಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ, ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಒಲಿಯಲಿಲ್ಲವೆನ್ನಲಾಗಿದೆ.

ರಮೇಶ್ ಜಾರಕಿಹೊಳಿ ಅವರು ಡಿಸಿಎಂ ಹುದ್ದೆಯ ಜೊತೆಗೆ ಜಲಸಂಪನ್ಮೂಲ ಖಾತೆಗೂ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಳಿಯೇ ಜಲ ಸಂಪನ್ಮೂಲ ಖಾತೆ ಇದೆ. ಹೀಗಾಗಿ, ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ಜೊತೆಗೆ ಜಲ ಸಂಪನ್ಮೂಲ ಖಾತೆ ಸಿಗಲು ಅಡ್ಡಿ ಇರುವುದಿಲ್ಲ. ಯಡಿಯೂರಪ್ಪ ಬಳಿ ಹಣಕಾಸು, ಇಂಧನ, ನಗರಾಭಿವೃದ್ಧಿ, ಸಕ್ಕರೆ, ಆಹಾರ ಪೂರೈಕೆ, ಬೆಂಗಳೂರು ನಗರಾಭಿವೃದ್ಧಿ, ಜವಳಿ, ಅರಣ್ಯ, ಐಟಿ, ಕಾರ್ಮಿಕ, ಯುವಜನ-ಕ್ರೀಡೆ, ಪೌರಾಡಳಿತ, ಸಣ್ಣ ಕೈಗಾರಿಕೆ, ಸಹಕಾರ, ತೋಟಗಾರಿಕೆ, ಗುಪ್ತಚರ, ಯೋಜನಾ ಮತ್ತು ಸಂಖ್ಯಿಕ ಖಾತೆಗಳೂ ಕೂಡ ಯಡಿಯೂರಪ್ಪ ಬಳಿಯೆ ಇವೆ. ಹಣಕಾಸು, ಗುಪ್ತಚರ ಬಿಟ್ಟು ಉಳಿದ ತಮ್ಮ ಎಲ್ಲಾ ಹೆಚ್ಚುವರಿ ಖಾತೆಗಳನ್ನು ನೂತನ ಸಂಭಾವ್ಯ ಸಚಿವರಿಗೆ ಯಡಿಯೂರಪ್ಪ ಬಿಟ್ಟುಕೊಡುವ ಸಾಧ್ಯತೆ ಇದೆ.

ಈಗ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಸರ್ಕಾರ ಸುಭದ್ರಗೊಂಡಿದೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಯಾವಾಗ ಬೇಕಾದರೂ ಆಗಬಹುದು. ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಕೂಡಲೇ ಮಾಡುವುದಾಗಿ ಯಡಿಯೂರಪ್ಪ ಭರವಸೆ ಕೂಡ ನೀಡಿದ್ಧಾರೆ. 12 ನೂತನ ಸಚಿವರಿಗೆ ಖಾತೆ ಹಂಚಿಕೆ ಕಾರ್ಯದಲ್ಲಿ ಅಸಮಾಧಾನ ಏಳದಂತೆ ನೋಡಿಕೊಳ್ಳುವುದಷ್ಟೇ ಯಡಿಯೂರಪ್ಪಗೆ ತಲೆನೋವಾಗಿರುವ ಕೆಲಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ