ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯ ಝಾನ್ಸಿರಾಣಿ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಗೋದಾಮಿನ ಬಹುಮಹಡಿ ಕಟ್ಟಡದಲ್ಲಿ ಇಂದು ದಿಢೀರ್ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ 43 ಜನ ಸಾವನ್ನಪ್ಪಿದ್ದರೆ, 21 ಜನ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಗಾಯಾಳುಗಳ ಪೈಕಿ ಅನೇಕರು ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂದು ಮುಂಜಾನೆ ಕಟ್ಟಡಲ್ಲಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಕಟ್ಟಡವನ್ನು ವ್ಯಾಪಿಸಿದ ಕಾರಣ ಜನ ನಿದ್ರೆಯಲ್ಲೇ ಬೆಂಕಿಗೆ ಆಹುತಿಯಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಆಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಕೊನೆಗೂ ಬೆಂಕಿಯನ್ನು ನಂದಿಸಲಾಗಿದೆ. ಅಲ್ಲದೆ, ಸುಮಾರು 50ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.
ಕಟ್ಟಡದಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರನ್ನೂ ರಕ್ಷಿಸಲಾಗುವುದು ಎಂದು ಅಗ್ನಿಶಾಮಕ ದಳದ ಸಿಬ್ಬಂಧಿ ತಿಳಿಸಿದ್ದಾರೆ. ಆದರೆ, ಈ ಅಗ್ನಿ ಅವಘಡಕ್ಕೆ ಕಾರಣ ನಿಖರ ಕಾರಣ ಏನು ಎಂಬುದು ಮಾತ್ರ ಈ ವರೆಗೆ ಸ್ಪಷ್ಟವಾಗಿಲ್ಲ.