ಬೆಂಗಳೂರು, ಡಿ.5- ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಈಗ ಬಿಬಿಎಂಪಿ ಮಟ್ಟಕ್ಕೂ ಇಳಿದು ಕಾಂಗ್ರೆಸ್ ಸದಸ್ಯರನ್ನು ಸೆಳೆಯುವ ವಿಫಲ ಯತ್ನ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪಂಗಿರಾಮನಗರದ ವಾರ್ಡ್ ಸಂಖ್ಯೆ110ರ ಸದಸ್ಯ ವಸಂತ್ಕುಮಾರ್ ಅವರನ್ನು ನಿನ್ನೆ ಕಾಫಿ ಕುಡಿಯುವ ಸಲುವಾಗಿ ಕರೆದುಕೊಂಡು ಹೋದ ಬಿಜೆಪಿಯ ಮುಖಂಡರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸಿದ್ದರು ಎಂದು ಆರೋಪಿಸಿದರು.
ವಸಂತ್ಕುಮಾರ್ ಅವರು ನಿನ್ನೆಯೇ ತಮಗೆ ಕರೆ ಮಾಡಿ ವಾಸ್ತವಾಂಶಗಳನ್ನು ಹೇಳಿದರು. ತಾವು ಪಕ್ಷ ಬಿಟ್ಟಿಲ್ಲ. ಕಾಂಗ್ರೆಸ್ನಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತುರ್ತು ಪತ್ರಿಕಾಗೋಷ್ಠಿ ಕರೆಯಬೇಕಾಯಿತು ಎಂದರು.
ವಸಂತ್ಕುಮಾರ್ ಅವರು ಮೊನ್ನೆಯವರೆಗೂ ಕಾಂಗ್ರೆಸ್ನಲ್ಲೇ ಇದ್ದು, ಪಕ್ಷದ ಅಭ್ಯರ್ಥಿ ಪರವಾಗಿಯೇ ಪ್ರಚಾರ ಮಾಡಿದ್ದರು. ಆದರೆ, ಇವರ ವಿರುದ್ಧ ಅಪಪ್ರಚಾರ ನಡೆದಿದೆ ಎಂದರು.
ಶಿವಾಜಿನಗರ ಕ್ಷೇತ್ರದಲ್ಲಿ ನಮ್ಮ ಯಾವ ಸದಸ್ಯರು, ನಾಯಕರು ಬಿಜೆಪಿಗೆ ಹೋಗಿಲ್ಲ. ಸ್ಥಳೀಯವಾಗಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸೋಲುವ ಭಯದಿಂದ ಬಿಜೆಪಿ ಅಪಪ್ರಚಾರಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ನ ಸದಸ್ಯರನ್ನು ಸೆಳೆಯಲು ಭಾರೀ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇನ್ನಿಲ್ಲದ ಆಮಿಷಗಳನ್ನು ತೋರಿಸಿ ಒತ್ತಡ ಹಾಕುತ್ತಿದ್ದಾರೆ. ಏನೆಲ್ಲಾ ಒತ್ತಡ ಹಾಕಿದ್ದಾರೆ ಎಂಬುದನ್ನು ಚುನಾವಣೆ ಮುಗಿದ ಬಳಿಕ ಬಹಿರಂಗ ಪಡಿಸುತ್ತೇವೆ. ಚುನಾವಣೆ ಸಮಯದಲ್ಲಿ ಹೇಳಿಕೆ ನೀಡಿದರೆ ಬೇರೆ ರೀತಿಯ ಸಮಸ್ಯೆಗಳಾಗುತ್ತವೆ. ಕೆಲವೊಂದಕ್ಕೆ ಸಾಕ್ಷಿ ಒದಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚುನಾವಣೆ ಮುಗಿದ ಬಳಿಕ ಮತ್ತೊಂದು ಸುತ್ತು ಪತ್ರಿಕಾಗೋಷ್ಠಿ ನಡೆಸುತ್ತೇವೆ ಎಂದರು.
ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಉಪ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜಕಾರಣ ಬದಲಾಗುವುದಂತೂ ನಿಶ್ಚಿತ. ಅನಗತ್ಯವಾಗಿ ವಾಮಮಾರ್ಗದ ಮೂಲಕ ಅಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡಿ, ಜನರ ಅಭಿಪ್ರಾಯಗಳಿಗೆ ಗೌರವ ಕೊಡಿ, ನಿಮ್ಮ ಹಳೆಯ ವ್ಯಾಪಾರ, ವ್ಯವಹಾರಗಳನ್ನು ನಿಲ್ಲಿಸಿ ಎಂದು ಆಪರೇಷನ್ ಕಮಲದ ವಿರುದ್ಧ ವಾಗ್ದಾಳಿ ನಡೆಸಿದರು.
ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹಾಗೂ ಮತ್ತಿತರರು ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಿಜೆಪಿ ಕೂಡಲೇ ಅನೈತಿಕ ರಾಜಕಾರಣ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಬಿಬಿಎಂಪಿ ಸದಸ್ಯ ವಸಂತಕುಮಾರ್ ಮಾತನಾಡಿ, ಬಿಜೆಪಿ ಕೆಲ ಸ್ನೇಹಿತರು ಕಾಫಿ ಕುಡಿಯಲು ಕರೆದುಕೊಂಡು ಹೋದರು. ಏಕಾಏಕಿ ಮುಖ್ಯಮಂತ್ರಿ ಅವರ ಎದುರು ನಿಲ್ಲಿಸಿದರು. ದಿಢೀರ್ ಬೆಳವಣಿಗೆಗಳಿಂದ ನನಗೆ ಗಲಿಬಿಲಿ ಆಯಿತು. ಏನು ಮಾತನಾಡಬೇಕು, ಏನು ಮಾಡಬೇಕು ಎಂಬುದು ತೋಚಲಿಲ್ಲ. ವಾಟ್ಸ್ಅಪ್ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿ ಸೇರಿದ್ದೇನೆ ಎಂಬ ಮಾಹಿತಿ ರವಾನೆಯಾಗಿದೆ. ಇದರಿಂದ ರಾತ್ರಿಯಿಡೀ ನಿದ್ದೆ ಬಂದಿಲ್ಲ. ಪಕ್ಷ ದ್ರೋಹ ಮಾಡಿದಂತಾಯಿತಲ್ಲಾ ಎಂದು ನೊಂದು ಕೊಂಡೆ, ತಕ್ಷಣವೇ ಅಧ್ಯಕ್ಷರಿಗೆ ಕರೆ ಮಾಡಿ ನಡೆದ ಘಟನೆಗಳಿಗೆ ಕ್ಷಮೆ ಕೇಳಿದೆ ಎಂದು ಹೇಳಿದರು.
ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ಶಾಸಕರನ್ನು ಖರೀದಿಸಲು ಆಪರೇಷನ್ ಕಮಲ ಮಾಡಿದ ಬಿಜೆಪಿ ಅದೇ ಮಾದರಿಯಲ್ಲಿ ಬಿಬಿಎಂಪಿಯಲ್ಲೂ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದೆ. ಆದರೆ, ಆಪರೇಷನ್ ವಿಫಲವಾಗಿದೆ. ಹೇಗಾದರು ಮಾಡಿ ಗೆಲ್ಲಲೇಬೇಕೆಂದು ಬಿಜೆಪಿ ಈ ರೀತಿಯ ಕುತಂತ್ರದ ಅಪಪ್ರಚಾರ ಮಾಡಿದೆ ಎಂದು ಆರೋಪಿಸಿದರು.