ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್ ಯೋಜನೆ- ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ-ಬಿಜೆಪಿಯಿಂದ ಅಗ್ಗದ ಪ್ರಚಾರ-ಶಾಸಕ ಎನ್.ಎ.ಹ್ಯಾರಿಸ್

ಬೆಂಗಳೂರು, ಡಿ.5- ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್‍ಗಳನ್ನು ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ. ಬಿಜೆಪಿ ಈ ಯೋಜನೆಯಲ್ಲಿ ಅಗ್ಗದ ಪ್ರಚಾರ ಪಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಆಕ್ರೋಶ ವ್ಯಕ್ತಪಡಿಸಿದರು.

ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಹೆಸರಿನಲ್ಲಿ ಆರೋಗ್ಯ ವಿಮೆಯ ಕಾರ್ಡ್‍ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್‍ದಾರರಿಗೆ 5 ಲಕ್ಷ , ಎಪಿಎಲ್ ಕಾರ್ಡ್‍ದಾರರಿಗೆ ಒಂದು ಲಕ್ಷವರೆಗೂ ಆರೋಗ್ಯ ವಿಮೆ ಸಿಗಲಿದೆ ಎಂದು ಹೇಳಲಾಗಿತ್ತು.

ಹೀಗಾಗಿ ನಾವೂ ಕೂಡ ನಮ್ಮ ಕ್ಷೇತ್ರಗಳಲ್ಲಿ ಸಾವಿರಾರು ಜನರಿಗೆ ಕಾರ್ಡ್‍ಗಳನ್ನು ಕೊಟ್ಟಿದ್ದೇವೆ. ಬೆಂಗಳೂರು ಒನ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಈ ಕಾರ್ಡ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಆದರೆ, ಖಾಸಗಿ ಆಸ್ಪತ್ರೆಗಳು ಈ ವಿಮಾ ಕಾರ್ಡ್‍ನ್ನು ಒಪ್ಪುತ್ತಿಲ್ಲ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರು ತಮ್ಮ ಸ್ವಂತ ಹಣದಲ್ಲೇ ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ ಎಂದರು.

ಖುದ್ದಾಗಿ ನಾನೇ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಪೋನ್ ಮಾಡಿ ವಿಚಾರಿಸಿದಾಗ. ಆ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಟೋಲ್ ಫ್ರೀ ಕರೆ ಮಾಡಿದರೆ ಅದು ಅಸ್ತಿತ್ವದಲ್ಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಆರೋಗ್ಯ ವಿಮೆ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಈರುಳ್ಳಿ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್‍ಟಿ, ನೋಟ್ ಬ್ಯಾನ್‍ನಿಂದಾಗಿ ದೇಶದ ಆರ್ಥಿಕತೆಯೇ ನಾಶವಾಗುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜನ ಸಾಮಾನ್ಯರು ಸಂಷ್ಟಕ್ಕೀಡಾಗಿದ್ದಾರೆ.

ಸಾಮಾನ್ಯ ಜನರ ಮೇಲೆ ಗದಾ ಪ್ರಹಾರವಾಗುತ್ತಿದೆ. ಈರುಳ್ಳಿಯನ್ನು ಶ್ರೀಮಂತರಷ್ಟೇ ಬಳಸುವುದಿಲ್ಲ. ಅದು ಜನ ಸಾಮಾನ್ಯರ ಆಹಾರ. ಕೆಜಿಗೆ 150ರೂ. ದಾಟುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಗ್ಗಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ