ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ-ಬಂಧಿತ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರ ಸಂಪರ್ಕ

ಬೆಂಗಳೂರು, ಡಿ.4- ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರು ಸಂಪರ್ಕ ದಲ್ಲಿರುವುದು ಕಂಡುಬಂದಿದ್ದು, ಅವರನ್ನೂ ವಿಚಾರಣೆಗೊಳಪಡಿಸಲು ಸಿಸಿಬಿ ಪೋಲೀಸರು ಮುಂದಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ನಗರ ಪೋಲೀಸ್ ಆಯುಕ್ತರಾದ ಭಾಸ್ಕರರಾವ್ ಅವರು, ಮ್ಯಾಚ್ ಬಳಿಕ ನಡೆಯುವ ಪಾರ್ಟಿಯಲ್ಲಿ ಚಲನಚಿತ್ರರಂಗದ ಕೆಲ ನಟ-ನಟಿಯರು ಭಾಗವಹಿಸಿದ್ದಾರೆ. ಈ ಮೂಲಕ ಆಟಗಾರರು ಹಾಗೂ ಆಡಳಿತ ಮಂಡಳಿಯ ಜೊತೆ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಅವರಿಗೆಲ್ಲ ಹಣದ ಮೂಲ ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.

ಎರಡು ಸಿನಿಮಾ ಮಾಡಿದ ತಕ್ಷಣ ಅಷ್ಟೊಂದು ಹಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಭಾಸ್ಕರರಾವ್ ಅವರು, ಕ್ರಿಕೆಟಿಗರ ಜೊತೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿರುವ ನಟ-ನಟಿಯರನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಾಕ್ಷಿ ಸಮೇತವಾಗಿ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ ಎಂದು ಹೇಳಿದರು.

ಒಂದು ವೇಳೆ ಯಾರಾದರೂ ಆ ರೀತಿ ಇದರಲ್ಲಿ ಭಾಗಿಯಾಗಿದ್ದೇ ಆದರೆ ಅವರು ಪೋಲೀಸರ ಮುಂದೆ ಹಾಜರಾಗಿ ಅಪ್ರೂವರ್ ಆದರೆ ಅವರನ್ನು ಹುಡುಕಿಕೊಂಡು ಪೋಲೀಸರು ಮನೆ ಬಾಗಿಲಿಗೆ ಹೋಗುವುದನ್ನು ತಡೆಯಬಹುದಾಗಿದೆ. ಇಲ್ಲದೆ ಹೋದರೆ ಮನೆ ಬಾಗಿಲಿಗೆ ಪೋಲೀಸರು ಹುಡುಕಿಕೊಂಡು ಹೋಗುವುದು, ಬಂಧಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸಿಆರ್‍ಪಿಸಿಯಲ್ಲಿ ಸಾಕ್ಷಿ ಅಪ್ರೂವರ್ ಆಗಲು ಅವಕಾಶವಿದೆ. ಆಟಗಾರರು ಮುಂದೆ ಬಂದರೆ ಇದನ್ನು ಪರಿಗಣಿಸುತ್ತೇವೆ ಎಂದು ಆಯುಕ್ತರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಂಟಿ ಪೋಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರು, ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ತರಬೇತುದಾರ ಸುಧೀಂದ್ರಶಿಂಧೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸುಧೀಂದ್ರ ಶಿಂಧೆ ಅವರು ಬೆಂಗಳೂರಿನ ಜಯನಗರದಲ್ಲಿ ಸೋಶಿಯಲ್ ಕ್ರಿಕೆಟ್ ಕ್ಲಬ್ ನಡೆಸುತ್ತಿದ್ದರು. ಅಶ್ವಕ್‍ಥಾರ್ ಆಲಿ ಆ ಕ್ಲಬ್‍ನಲ್ಲಿ ಆಡುವ ಆಟಗಾರರಿಗೆ ಸಹಾಯ ಮಾಡಿ ಪ್ರಾಯೋಜಕತ್ವ ನೀಡುತ್ತಿದ್ದರು.

ಈ ಕ್ಲಬ್‍ನಲ್ಲಿ ತರಬೇತಿ ಪಡೆದ ಬಹಳಷ್ಟು ಮಂದಿ ಆಟಗಾರರು ಕೆಪಿಎಲ್‍ನ ವಿವಿಧ ತಂಡಗಳಲ್ಲಿ ಆಟವಾಡಿದ್ದಾರೆ. ಕ್ಲಬ್ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ಕಳುಹಿಸಿ ಅವರಿಂದ ಮ್ಯಾಚ್ ಫಿಕ್ಸಿಂಗ್ ಮಾಡಿಸಲಾಗುತ್ತಿತ್ತು ಎಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ಸಂದೀಪ್ ಪಾಟೀಲ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ