ಬೆಂಗಳೂರು, ಡಿ.4-ಅಧಿಕಾರದಲ್ಲಿರುವವರ ಅಸಾಮಥ್ರ್ಯದಿಂದಾಗಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಜನರು ಕಣ್ಣೀರು ಸುರಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈರುಳ್ಳಿ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ಬೆಲೆ ಏರಿಕೆಗೆ ಅತಿವೃಷ್ಟಿ ಕಾರಣವಿರಬಹುದು. ಆದರೆ ಇಂತಹ ಸಮಸ್ಯೆಯನ್ನು ನಿರ್ಲಕ್ಷಿಸಿ ಬಳಕೆದಾರರ ಹಿತರಕ್ಷಣೆಗೆ ಕ್ರಮಕೈಗೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.
ಆಂತರಿಕ ಬಳಕೆಗೆ ಅಗತ್ಯದಷ್ಟು ಈರುಳ್ಳಿ ಆಮದಿಗೆ ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕಿತ್ತು. ಕಾಳಸಂತೆಕೋರರ ಅಕ್ರಮ ದಾಸ್ತಾನು ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಾಗಿತ್ತು. ಈ ಎರಡೂ ಸರ್ಕಾರಗಳ ವೈಫಲ್ಯದಿಂದ ಜನ ಬೆಲೆ ಏರಿಕೆಯ ಬಿಸಿಯಿಂದ ಬೇಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.