ಬೆಂಗಳೂರು, ಡಿ.4-ಹೈದರಾಬಾದ್ನ ಪ್ರಿಯಾಂಕಾರೆಡ್ಡಿ ಪ್ರಕರಣದ ನಂತರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿರುವ ನಗರದ ಪೋಲೀಸ್ ಹಿರಿಯ ಅಧಿಕಾರಿಗಳು, ಗಸ್ತು ಪಡೆಯ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿ ತುರ್ತು ಸಮಯದಲ್ಲಿ ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಪಟ್ ಅವರು ಗಸ್ತು ಪೋಲೀಸ್ ಪಡೆಯಾದ ಚೀತಾಸ್, ಹೊಯ್ಸಳ, ಪಿಂಕ್ ಹೊಯ್ಸಳದ 160ಕ್ಕೂ ಹೆಚ್ಚು ವಾಹನಗಳ ಸಿಬ್ಬಂದಿಗಳ ಜೊತೆ ತುರ್ತು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ರೋಹಿಣಿ ಅವರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು. ಶಾಲೆ, ಕಾಲೇಜು, ಪಾರ್ಕ್, ಬಯಲು ಪ್ರದೇಶದ ಬಳಿ ನಿರಂತರವಾಗಿ ಗಸ್ತು ತಿರುಗಬೇಕು ಎಂದು ಸೂಚಿಸಿದ್ದಾರೆ.
ಪೋಲೀಸ್ ಕಂಟ್ರೋಲ್ ರೂಂನಿಂದ, ಪೋಲೀಸ್ ಠಾಣೆಯಿಂದ ಅಥವಾ ಸಾರ್ವಜನಿಕರಿಂದ ಯಾವುದೇ ಪೋನ್ ಕರೆಗಳು ಬಂದರೂ ನಿರ್ಲಕ್ಷಿಸದೆ ತಕ್ಷಣವೇ ಸ್ಪಂದಿಸಬೇಕು. ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಶೀಲನೆ ನಡೆಸಬೇಕು. ಪೋಲೀಸ್ ಠಾಣಾಗಳ ವ್ಯಾಪ್ತಿಯ ಗೊಂದಲಗಳನ್ನು ನೆಪಮಾಡಿಕೊಂಡು ಕಾಲಹರಣ ಮಾಡಬಾರದು. ಮೊದಲು ಘಟನೆ ನಡೆದ ಸ್ಥಳಕ್ಕೆ ಧಾವಿಸುವುದು, ಸಂತ್ರಸ್ತರಿಗೆ ನೆರವು ನೀಡುವುದು ಪೋಲೀಸರ ಆದ್ಯತೆ. ಅನಂತರ ಕೇಸು ದಾಖಲು, ಠಾಣೆಯ ವ್ಯಾಪ್ತಿಯ ಬಗ್ಗೆ ನಿಧಾನವಾಗಿ ನಿರ್ಧಾರ ಮಾಡೋಣ ಎಂದು ಡಿಸಿಪಿ ಹೇಳಿದ್ದಾರೆ.
ಪೋಲೀಸರು ಗಸ್ತು ತಿರುಗುವ ವೇಳೆ ಅತ್ಯಂತ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸಬೇಕು. ಅನುಮಾನಾಸ್ಪದ ಸನ್ನಿವೇಶಗಳ ಮೇಲೆ ನಿಗಾ ಇಡಬೇಕು. ಅಗತ್ಯ ಸಂದರ್ಭದಲ್ಲಿ ಸೌಜನ್ಯಯುತವಾದ ವಿಚಾರಣೆಯನ್ನು ನಡೆಸುವಂತೆ ಅವರು ಸೂಚಿಸಿದ್ದಾರೆ.