ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಚಿದಂಬರಂ ಅವರಿಗೆ 105 ದಿನಗಳ ನಂತರ ಜಾಮೀನು ನೀಡಿದೆ, ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಸೂಚಿಸಿರುವ ಪೀಠ ಯಾರಿಗೂ ಸಂದರ್ಶನ, ಸಾರ್ವಜನಿಕ ಹೇಳಿಕೆ ನೀಡಬಾರದು ಎಂದು ಸೂಚಿಸಿದೆ.
ನವೆಂಬರ್ 15ರಂದು ಚಿದಂಬರಂ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಪ್ರಮುಖ ಪಾತ್ರವಹಿಸಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇಂದು ಜಾಮೀನು ಅರ್ಜಿಯ ಅಂತಿಮ ತೀರ್ಪು ಹೊರಬಿದ್ದಿದೆ.
ಕಳೆದ ಆಗಸ್ಟ್ 21 ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು, ಚಿದಂಬರಮ್ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ ಮೊತ್ತದಷ್ಟು ವಿದೇಶೀ ಬಂಡವಾಳ ಹೂಡಿಕೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಎಫ್ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಮಗನ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರೆಂಬ ಆರೋಪವಿದೆ.