ಬೆಳಗಾವಿ: ಮಹಾರಾಷ್ಟ್ರದಲ್ಲಿಯಂತೆ ಕರ್ನಾಟಕದಲ್ಲೂ ರಾಜಕೀಯ ಬದಲಾವಣೆಗಳಾಗುತ್ತವೆ. ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. ಗೋಕಾಕ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ, ಶಾಸಕ ಸತೀಶ್ ಜಾರಕಿಹೊಳಿ ಮೊದಲಾದವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಸಿವಿ, ಡಿ. 9ರಂದು ಇಡೀ ದೇಶಕ್ಕೆ ಶುಭ ಸುದ್ದಿ ಸಿಗಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಉದ್ದೇಶ ಬಹಳ ಸ್ಪಷ್ಟವಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಸಕಲ ಪ್ರಯತ್ನಗಳನ್ನೂ ಮಾಡುತ್ತದೆ ಎಂದು ಹೇಳುವ ಮೂಲಕ ಅವರು ಜೆಡಿಎಸ್ ಜೊತೆಗೆ ಮರುಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದರು.
ಕೇಂದ್ರ ಸರ್ಕಾರದಿಂದ ಪ್ರಜಾತಂತ್ರ ಮತ್ತು ಸಂಸದೀಯ ಮೌಲ್ಯಗಳಿಗೆ ಧಕ್ಕೆಯಾಗಿದೆ. ಜನರಿಗೂ ಇದರ ಅರಿವಾಗತೊಡಗಿದೆ. ದೇಶಾದ್ಯಂತ ಜನರು ಜಾಗೃತಗೊಳ್ಳುತ್ತಿದ್ದಾರೆ. ಕರ್ನಾಟಕದ ಜನರೂ ಜಾಗೃತಗೊಂಡಿದ್ಧಾರೆ. ಪಕ್ಷಾಂತರಿಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಉಳಿಸುವ ವಿಶ್ವಾಸ ನಮಗಿದೆ ಎಂದವರು ಹೇಳಿದರು.
“15 ಕ್ಷೇತ್ರಗಳಿಗೆ ಚುನಾವಣೆ ಯಾಕೆ ಆಗುತ್ತಿದೆ ಅಂತ ನಿಮಗೆ ಗೊತ್ತು. ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಗೋಕಾಕ್, ಅಥಣಿ, ಕಾಗವಾಡದಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದು ಬಂದವರು ಕಾಂಗ್ರೆಸ್ನ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಜೊತೆ ಸೇರಿದ್ದಾರೆ. ಕುದುರೆ ವ್ಯಾಪಾರದಲ್ಲಿ ತಲ್ಲೀನರಾದರು. ರಾಜಕಾರಣಿಗಳು ಹಣಕ್ಕೋಸ್ಕರ ಪಕ್ಷ ಬಿಟ್ಟು ಹೋಗೋದು ಪ್ರಜಾತಂತ್ರಕ್ಕೆ ಮಾರಕವಲ್ಲವೇ? ಒಂದು ಪಕ್ಷದಿಂದ ಆಯ್ಕೆಯಾಗಿ ನಂತರ ದಿಢೀರನೇ ಪಕ್ಷ ಬದಲಾಯಿಸಿಬಿಟ್ಟರೆ ಪ್ರಜಾತಂತ್ರ ವ್ಯವಸ್ಥೆಗೆ ಅರ್ಥವೇನು ಉಳಿಯುತ್ತದೆ? ಕರ್ನಾಟಕ ರಾಜಕಾರಣವನ್ನು ಸ್ವಚ್ಛ ಮಾಡಲು ಈ ರಾಜ್ಯದ ಜನತೆಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಗುಜರಾತ್ ಉಪಚುನಾವಣೆಯಲ್ಲೂ ಪಕ್ಷಾಂತರಿಗಳಿಗೆ ಸೋಲಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರೆಲ್ಲರಿಗೂ ಸೋಲಾಗಿದೆ” ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಅಭಿಪ್ರಾಯಪಟ್ಟರು.
ನೀವು ಪಕ್ಷಾಂತರಿಗಳನ್ನು ಗೆಲ್ಲಿಸಿದರೆ ಕರ್ನಾಟಕವು ಪಕ್ಷಾಂತರಿಗಳ ರಾಜ್ಯವಾಗಲಿದೆ. ಹಣಬಲ ಇದ್ದವರು ಚುನಾವಣೆ ಗೆಲ್ಲುತ್ತಾರೆ. ಇಷ್ಟ ಬಂದ ಹಾಗೆ ಪಕ್ಷಾಂತರ ಮಾಡಿಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ಅತ್ಯಂತ ಅಪಾಯಕಾರಿ ವಿಚಾರವಾಗುತ್ತದೆ. ಈ ಪಕ್ಷಾಂತರಿಗಳಿಗೆ ನೀವು ಪಾಠ ಕಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆ ಸಾಕಷ್ಟು ನೋವು ಅನುಭವಿಸಿದೆ. ಪ್ರವಾಹದಿಂದ ಜನರು ಮನೆಮಠ, ಕೃಷಿಭೂಮಿ ಕಳೆದುಕೊಂಡು ಸಂತ್ರಸ್ತಗೊಂಡಿದ್ದಾರೆ. ಕರ್ನಾಟಕ ಸರ್ಕಾರ ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರ ಕೂಡ ಸ್ಪಂದಿಸಲಿಲ್ಲ. ಪ್ರವಾಹ ಬಂದಾಗ ಜನರ ಜೊತೆ ನಿಂತು ಕೆಲಸ ಮಾಡಿದ್ದು ಸತೀಶ್ ಜಾರಕಿಹೊಳಿ. ಇದು ಎಲ್ಲರಿಗೂ ಗೊತ್ತು. ಆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಏನು ಮಾಡುತ್ತಿದ್ದರು? ಮುಂಬೈನಲ್ಲಿದ್ದುಕೊಂಡು ಕುದುರೆ ವ್ಯಾಪಾರದಲ್ಲಿ ಮುಳುಗಿಹೋಗಿದ್ದರು. ಬಿಜೆಪಿ ಜೊತೆ ಸೇರಿಕೊಂಡು ಮೈತ್ರಿ ಸರ್ಕಾರ ಬೀಳಿಸಲು ತೊಡಗಿಸಿಕೊಂಡಿದ್ದರು. ಇದು ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಧ್ಯೆ ಇರುವ ವ್ಯತ್ಯಾಸ ಎಂದು ರಮೇಶ್ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಆರ್ಥಿಕತೆ ಕುಸಿತ; ಅಪರಾಧ ಹೆಚ್ಚಳ:
ಜಿಡಿಪಿ ದರ ಪಾತಾಳ ಸೇರುತ್ತಿದೆ. ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದೆ. ಎಲ್ಲಿ ಹೋಯಿತು ಅಚ್ಛೇ ದಿನ್? ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ದಿನೇ ದಿನೇ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ಧಾರೆ. ಹೊಸ ಕೆಲಸ ಸಿಗುವುದಿರಲಿ, ಇರುವ ಕೆಲಸವನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ. ಮಹಿಳಾ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಮಹಿಳೆಯರ ಮೇಲೆ ದಿನನಿತ್ಯ ಅತ್ಯಾಚಾರ, ಕೊಲೆಗಳಾಗುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ಕೃಷಿ ಕ್ಷೇತ್ರವೂ ಸಂಕಷ್ಟದಲ್ಲಿದೆ ಎಂದು ಕೇರಳದ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಕೆಸಿವಿ ಟೀಕಿಸಿದರು.
ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ:
ಕೇಂದ್ರ ಸರ್ಕಾರದ 40 ಸಾವಿರ ಕೋಟಿ ಅನುದಾನವನ್ನು ಉಳಿಸಿಕೊಳ್ಳಲು ಮಹಾರಾಷ್ಟ್ರದಲ್ಲಿ ತುರ್ತಾಗಿ ಸರ್ಕಾರ ರಚಿಸಲಾಯಿತು ಎಂದಿದ್ದ ಅನಂತಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಈ ರೀತಿ ಅನುದಾನದ ಹಣ ದುರುಪಯೋಗ ಮಾಡಿಕೊಂಡಿದ್ದರ ಅನುಭವದ ಮೇಲೆ ಅವರು ಆ ರೀತಿ ಹೇಳಿದ್ದಿರಬಹುದು. ಕಾಂಗ್ರೆಸ್ ಪಕ್ಷಕ್ಕೆ ಆ ಸಂಸ್ಕೃತಿ ಇಲ್ಲ. ಇದು ಬಿಜೆಪಿ ಸಂಸ್ಕೃತಿ. ನೀವು ಜಾಣ ಪತ್ರಕರ್ತರಿದ್ದೀರಾ. ನಿಮಗೇ ಗೊತ್ತು ಬಿಜೆಪಿಯವರು ಒಂದೊಂದು ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಅಂತ. ರೈತರು ಸಮಸ್ಯೆಯಲ್ಲಿದ್ದಾಗ ಕೊಡಲು ಇವರಿಗೆ ಹಣವಿಲ್ಲ. ಚುನಾವಣೆಗೆ ಖರ್ಚು ಮಾಡಲು ಹಣವಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.