ಫಾಸ್ಟ್‌ ಟ್ಯಾಗ್‌ ಗಡುವು ವಿಸ್ತರಣೆ: ಟ್ಯಾಗ್ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ವಾಹನ ಚಾಲಕರ ಬೇಡಿಕೆ

ಬೆಂಗಳೂರು: ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಗಡುವು ವಿಸ್ತರಣೆಯಾದ ಹಿನ್ನೆಲೆಯಲ್ಲಿ ಇನ್ನಾದರೂ ಟೋಲ್‌ಗಳಲ್ಲಿ ಟ್ಯಾಗ್‌ ಖರೀದಿಗೆ ಸಮರ್ಪಕವಾದ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಈ ನಡುವೆ, ಟೋಲ್‌ಗಳಲ್ಲಿ ಮಾರ್ಷಲ್‌ಗಳ ನಿಯೋಜನೆ ಸೇರಿದಂತೆ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಎನ್‌ಎಚ್‌ಎಐ ಖಾಸಗಿ ಟೋಲ್‌ ಕಂಪನಿಗಳಿಗೆ ಸೂಚಿಸಿದೆ.

ಫಾಸ್ಟ್‌ ಟ್ಯಾಗ್‌ ಅಳವಡಿಕೆಯ ಗಡುವು ಡಿ.1 ರಿಂದ ಡಿ.15 ಕ್ಕೆ ವಿಸ್ತರಣೆಯಾಗಿದೆ. ಟೋಲ್‌ಗಳಲ್ಲಿ ಟ್ಯಾಗ್‌ ಖರೀದಿಗೆ ಸರಿಯಾದ ವ್ಯವಸ್ಥೆ ಮಾಡದಿರುವುದರಿಂದ ಚಾಲಕರು ಬಿಸಿಲಿನಲ್ಲಿ ಉದ್ದ ಸಾಲಿನಲ್ಲಿ ನಿಂತು, ಗಂಟೆಗಟ್ಟಲೆ ಕಾದು ಟ್ಯಾಗ್‌ ಖರೀದಿಸುತ್ತಿದ್ದಾರೆ. ಡಿ.1 ಕ್ಕೆ ಗಡುವು ಇದ್ದಿದ್ದರಿಂದ ಶುಕ್ರವಾರವೂ ಚಾಲಕರು ಸಾಲಿನಲ್ಲಿ ನಿಂತು ಹೈರಾಣಾದರು. ಉಳಿದಿರುವ ದಿನಗಳಲ್ಲಿ ಚಾಲಕರಿಗೆ ಅನುಕೂಲವಾಗುವಂತೆ ಟ್ಯಾಗ್‌ ಖರೀದಿಗೆ ಟೋಲ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಬಂದಿದೆ.

ಟೋಲ್‌ಗಳಲ್ಲಿ ಸಿಬ್ಬಂದಿ ಕೊರತೆಯಿಂದಲೂ ಟ್ಯಾಗ್‌ ಖರೀದಿ ತಡವಾಗುತ್ತಿದೆ. ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ. ತುಮಕೂರು ರಸ್ತೆ, ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್‌, ಹೊಸಕೋಟೆ ಬಳಿ, ಹೊಸೂರು ರಸ್ತೆ, ನೈಸ್‌ ರಸ್ತೆ, ಯಲಹಂಕದ ರಾಜಾನುಕುಂಟೆ ಟೋಲ್‌ಗಳಲ್ಲಿ ಟ್ಯಾಗ್‌ ಖರೀದಿಗೆ ಅವಕಾಶವಿದೆ.

”15 ದಿನಗಳ ಕಾಲಾವಕಾಶ ಸಾಲುವುದಿಲ್ಲ. ಕನಿಷ್ಠ ಆರು ತಿಂಗಳ ಕಾಲಾವಕಾಶಕ್ಕೆ ಒತ್ತಾಯಿಸುತ್ತೇವೆ. ಈಗ ಇರುವ ಹದಿನೈದು ದಿನಗಳಲ್ಲಿ ಟೋಲ್‌ಗಳಲ್ಲಿ ಟ್ಯಾಗ್‌ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಕರ್ನಾಟಕ ರಾಜ್ಯ ಪ್ರವಾಸಿ ವಾಹನ ಆಪರೇಟರ್‌ ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಒತ್ತಾಯಿಸಿದ್ದಾರೆ.

ಟ್ಯಾಕ್ಸಿ ಚಾಲಕರು ಟೋಲ್‌ಗಳಲ್ಲಿ ನಿಂತು ಕಾಯುವುದರಿಂದ ದಿನದ ದುಡಿಮೆಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರತ್ಯೇಕವಾಗಿ ಶಿಬಿರ ನಡೆಸಿ ಟ್ಯಾಗ್‌ ಖರೀದಿಯನ್ನು ಸುಲಭವಾಗಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

”ಗಡುವನ್ನು ಮೂರು ತಿಂಗಳ ಕಾಲ ವಿಸ್ತರಿಸಬೇಕು. ಈ ಅವಧಿಯಲ್ಲಿ ಅಧಿಕಾರಿಗಳು ಅಲ್ಲಲ್ಲಿ ಶಿಬಿರ ನಡೆಸಿ ಚಾಲಕರು ಸುಲಭವಾಗಿ ಟ್ಯಾಗ್‌ ಖರೀದಿಸುವಂತೆ ಮಾಡಬೇಕು” ಎಂದು ಓಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌, ಉಬರ್‌ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ಒತ್ತಾಯಿಸಿದ್ದಾರೆ.

ಸ್ಥಳದಲ್ಲೇ ರೀಚಾರ್ಜ್
”ಟೋಲ್‌ಗೆ ವಾಹನ ಬಂದಾಗ ರೀಚಾರ್ಜ್‌ ಮೊತ್ತ ಕಡಿಮೆ ಇದ್ದರೆ ಟೋಲ್‌ನಲ್ಲೇ ರೀಚಾರ್ಜ್‌ ಮಾಡಿಸಿಕೊಡಲಾಗುತ್ತದೆ. ಟೋಲ್‌ನ ಶುಲ್ಕವನ್ನು ಅಲ್ಲಿಯೇ ಕಡಿತ ಮಾಡಿ ರೀಚಾರ್ಜ್‌ಮಾಡುವ ಆಯ್ಕೆಯೂ ಇದೆ. ಆದರೆ ಫಾಸ್ಟ್‌ ಟ್ಯಾಗ್‌ ಖಾತೆಯಲ್ಲಿ ರೀಚಾರ್ಜ್‌ ಮೊತ್ತ ಬರಲು ಕನಿಷ್ಠ 10 ನಿಮಿಷ ಬೇಕಾಗುತ್ತದೆ. ಮೊತ್ತ ಕಡಿಮೆ ಇದ್ದರೂ ಸಮಸ್ಯೆಯಾಗುವುದಿಲ್ಲ,” ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಬಿ.ಟಿ.ಶ್ರೀಧರ್‌ ತಿಳಿಸಿದ್ದಾರೆ.

ದಟ್ಟಣೆ ನಿಯಂತ್ರಿಸಿ
ಟೋಲ್‌ಗಳಲ್ಲಿ ಒಂದು ಕ್ಯಾಶ್‌ ಲೇನ್‌ಗೆ ಅವಕಾಶ ನೀಡಲಾಗಿದೆ. ಇಲ್ಲಿ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ