ಒಂದೇ ಒಂದು ದೂರವಾಣಿ ಕರೆ, 10 ರೂ. ಶುಲ್ಕ ಕಟ್ಟಲು ಹೇಳಿ 1.20 ಲಕ್ಷ ರೂ.ಗೆ ಕನ್ನ!

ಬೆಂಗಳೂರು: ಕೆಲಸಕ್ಕಾಗಿ ಆನ್‌ಲೈನ್‌ ಪೋರ್ಟಲ್‌ಗಳಲ್ಲಿಅರ್ಜಿ ಹಾಕಿರುವವರೇ ಎಚ್ಚರಿಕೆ ! ಶೈನ್‌ ಡಾಟ್‌ ಕಾಮ್‌ ಹೆಸರಿನಲ್ಲಿಖದೀಮರು ನಗರದ ಮಹಿಳೆಯೊಬ್ಬರ ಖಾತೆಗೆ ಕನ್ನ ಹಾಕಿ 1.20 ಲಕ್ಷ ರೂ. ದೋಚಿದ್ದಾರೆ. ಇತ್ತೀಚೆಗೆ, ಅದರಲ್ಲೂನವೆಂಬರ್‌ ತಿಂಗಳಲ್ಲೇ ಶೈನ್‌ ಡಾಟ್‌ಕಾಮ್‌ಗೆ ಸಂಬಂಧಿಸಿದ ಹಲವು ದೂರುಗಳು ”ಆನ್‌ಲೈನ್‌ ಕನ್ಸ್ಯೂಮರ್‌ ಕಂಪ್ಲೇಂಟ್ಸ್‌”ಗಳಲ್ಲಿ ಸಲ್ಲಿಕೆಯಾಗುತ್ತಿವೆ.

ಹುಳಿಮಾವು ನಿವಾಸಿ ದೀಪಿಕಾ ವತ್ಸಾ ಆನ್‌ಲೈನ್‌ನಲ್ಲಿ ಕೆಲಸ ಹುಡುಕುತ್ತಿದ್ದರು. ಹೀಗಿರುವಾಗ ಶೈನ್‌ ಜಾಬ್‌ ಪೋರ್ಟಲ್‌ನ ಪ್ರತಿನಿಧಿ ಎಂದು ಹೇಳಿಕೊಂಡು ಸತೀಶ್‌ ಎಂಬಾತ ನ.21ರಂದು ಬೆಳಗ್ಗೆ 10.30ಕ್ಕೆ ದೀಪಿಕಾ ಅವರಿಗೆ ಕರೆ ಮಾಡಿದ್ದಾನೆ. ”ನೀವು ಕೆಲಸ ಹುಡುಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ ಸತೀಶ್‌, ತನ್ನ ಎಲ್ಲ ವೈಯಕ್ತಿಕ ಮಾಹಿತಿಯನ್ನು ತಿಳಿಸಿದ. ನಂತರ ನೀವು ನಿಮ್ಮ ಶೈನ್‌ ಜಾಬ್‌ ಪೋರ್ಟಲ್‌ನ ಯುಸರ್‌ ಐಡಿಗೆ ಲಾಗಿನ್‌ ಆಗಿ ಒಂದು ತಿಂಗಳಾಗಿದೆ. ಹೀಗಾಗಿ, ಕೂಡಲೇ ನಿಮ್ಮ ಐಡಿಗೆ ಲಾಗಿನ್‌ ಆಗಿ ಎಂದು \RWWW.THESHINE.IN/BETA ಎಂಬ ವೆಬ್‌ಸೈಟ್‌ ಕಳುಹಿಸಿ 10 ರೂ. ಪಾವತಿ ಮಾಡಿ ಆ್ಯಕ್ಟಿವೇಟ್‌ ಮಾಡಿಕೊಳ್ಳಿ ಎಂದು ಹೇಳಿದ.

ಅವರ ಮಾತನ್ನು ನಂಬಿ ಪೋರ್ಟಲ್‌ಗೆ ಲಾಗಿನ್‌ ಆಗಿ 10 ರೂ. ಪಾವತಿ ಮಾಡುತ್ತಿರುವಾಗ ಏಕಾಏಕಿ ನನ್ನ ಬ್ಯಾಂಕ್‌ನಿಂದ ಒಟ್ಟು 1.20 ಲಕ್ಷ ರೂ. ಕಡಿತವಾಗಿ ಕಲ್ಯಾಣ್‌ ಸಿಂಗ್‌, ಸುಬಾ ಬಾಯಿ ಹಾಗೂ ಅಶೋಕ್‌ ಕುಮಾರ್‌ ಎಂಬುವರ ಪೇಟಿಎಂ ಮತ್ತು ಮೊಬಿಕ್ವಿಕ್‌ ಖಾತೆಗೆ ಜಮಾ ಆಗಿರುವ ಕುರಿತು ನನ್ನ ಮೊಬೈಲ್‌ ನಂಬರ್‌ಗೆ ಸಂದೇಶಗಳು ಬಂದಿವೆ” ಎಂದು ದೂರಿನಲ್ಲಿ ದೀಪಿಕಾ ವಿವರಿಸಿದ್ದಾರೆ.

ನಂತರ ನನಗೆ ಕರೆ ಮಾಡಿದ ವ್ಯಕ್ತಿಗೆ ವಾಪಸ್‌ ಕರೆ ಮಾಡಿದಾಗ, ಸರ್ವರ್‌ ಬ್ಯುಸಿಯಾಗಿದೆ ಎಂಬ ಉತ್ತರ ದೊರಕಿತು. ನಂತರ ಮತ್ತೊಬ್ಬರೊಂದಿಗೆ ಮಾತನಾಡಿ ಎಂದು ಕಾಲ್‌ ಕನೆಕ್ಟ್ ಮಾಡಿದರು. ಹಣ ವಾಪಸ್‌ ಹಾಕುತ್ತೇವೆಂದು ಒಬ್ಬ ಮಹಿಳೆ ಹೇಳಿ ಕರೆ ಕಟ್‌ ಮಾಡಿದರು. ಹಣ ಹೋಗಿದ್ದರಿಂದ ಸಿಟಿ ಬ್ಯಾಂಕ್‌ನಲ್ಲಿರುವ ನನ್ನ ಖಾತೆಯನ್ನು ಬ್ಲಾಕ್‌ ಮಾಡಿಸಿದ್ದೇನೆ. ನ.22ರಂದು ಬೆಳಗ್ಗೆ ಮತ್ತೆ ಕರೆ ಮಾಡಿದ ಅಪರಿಚಿತರು, ಒಟಿಪಿ ಜನರೇಟ್‌ ಮಾಡಿ, ಅದನ್ನು ತಿಳಿಸಿ ಎಂದು ಹೇಳಿದರು. ಆದರೆ, ನಾನು ಒಟಿಪಿ ತಿಳಿಸಿಲ್ಲ” ಎಂದು ವಂಚನೆ ಕುರಿತು ದೀಪಿಕಾ ವಿವರಿಸಿದ್ದಾರೆ.

”ಆನ್‌ಲೈನ್‌ನಲ್ಲಿ ನನ್ನ ಬ್ಯಾಂಕ್‌ನ ಮಾಹಿತಿಯನ್ನು ಪಡೆದುಕೊಂಡು ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ” ಎಂದು ದೂರಿನಲ್ಲಿ ದೀಪಿಕಾ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದರು.
ಶೈನ್‌ ಡಾಟ್‌ ಕಾಮ್‌ ಹೆಸರಿನಲ್ಲಿ ಖದೀಮರು, ಕರೆ ಮಾಡಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿರುವ ಕುರಿತು ಆನ್‌ಲೈನ್‌ ದೂರು ತಾಣ ಕನ್ಸ್ಯೂಮರ್‌ ಕಂಪ್ಲೆಂಟ್ಸ್‌ನಲ್ಲಿ ಹಲವು ದೂರುಗಳು ಸಲ್ಲಿಕೆಯಾಗಿವೆ. ಈ ಕುರಿತು ಶೈನ್‌ ಡಾಟ್‌ ಕಾಮ್‌ ಕೂಡ ಸ್ಪಷ್ಟನೆ ನೀಡಿದ್ದು, ಯಾವುದೇ ಪ್ರತಿನಿಧಿಗೆ ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕ್‌ ವಿವರಗಳನ್ನು ಶೇರ್‌ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ