
ಮಂಡ್ಯ: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಹುಣಸೂರು ಮತ್ತು ಕೆಆರ್ ಪೇಟೆ ಉಪಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಹುಣಸೂರು ಕ್ಷೇತ್ರದ ಪ್ರಚಾರಕ್ಕೆ ಹೊರಟ ಡಿಕೆ ಶಿವಕುಮಾರ್ ಮಾರ್ಗ ಮಧ್ಯೆ ಮದ್ದೂರಿನ ಸೋಮನಹಳ್ಳಿ ಗ್ರಾಮದಲ್ಲಿರುವ ಮಾಜಿ ಶಾಸಕ ದಿ. ಎಸ್.ಎಂ. ಶಂಕರ್ ನಿವಾಸದಲ್ಲಿ ಉಪಹಾರ ಸೇವಿಸಿದರು.
ಈ ವೇಳೆ ಅವರು ಮದ್ದೂರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಮಾತಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಗೊಂದಲವೂ ಇಲ್ಲ. ಒಗ್ಗಟ್ಟಿನಿಂದ ಎಲ್ಲರೂ ಪಕ್ಷದ ಪರವಾಗಿ ಉಪಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ,” ಎಂದರು.
ಮುಂದಿನ ದಿನಗಳಲ್ಲಿ ಮದ್ದೂರಿನಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸಭೆ ಕರೆದು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿದ ಡಿಕೆಶಿ, ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಅಭಿಪ್ರಾಯಪಟ್ಟರು.
ಶಂಕರ್ ನಿವಾಸದಲ್ಲಿ ಉಪಹಾರ ಮುಗಿಸಿದ ಶಿವಕುಮಾರ್ ನಂತರ ಹುಣಸೂರಿನತ್ತ ಹೊರಟರು. ಮಧ್ಯಾಹ್ನ ಅವರು ಕೆಆರ್ ಪೇಟೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಲ್ಲಿಂದ ಅವರು ಹುಣಸೂರಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಎಚ್ಪಿ ಮಂಜುನಾಥ್ ಪರ ಪ್ರಚಾರ ನಡೆಸಲಿದ್ದಾರೆ.