ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ; ನೂತನ ಶಾಸಕರಿಂದ ಪ್ರಮಾಣವಚನ 

ಮುಂಬೈ: ಮಹಾರಾಷ್ಟ್ರದ 14ನೇ ವಿಧಾನಸಭೆಯ ವಿಶೇಷ ಅಧಿವೇಶನ ಬುಧವಾರ ಬೆಳಗ್ಗೆ ಆರಂಭವಾಗಿದ್ದು ನೂತನ ಚುನಾಯಿತ ಸದಸ್ಯರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇಂದು ಬೆಳಗ್ಗೆ 8 ಗಂಟೆಗೆ ವಿಧಾನಸಭೆಗೆ ಆಗಮಿಸಿದ ಎಲ್ಲಾ 288 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿಶೇಷ ಅಧಿವೇಶನ ಕರೆದಿದ್ದಾರೆ.
ನಿನ್ನೆ ಅಪರಾಹ್ನ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇಂದು ಸದನಕ್ಕೆ ಆಗಮಿಸುತ್ತಿದ್ದಂತೆ ವಿಧಾನ ಭವನದ ದ್ವಾರದಲ್ಲಿ ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅಜಿತ್ ಪವಾರ್ ಮತ್ತು ರೋಹಿತ್ ಪವಾರ್ ಅವರನ್ನು ಪ್ರೀತಿಯಿಂದ ಅಪ್ಪುಗೆ ನೀಡಿ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆಯಿತು.  ನನಗೆ ದಾದಾ(ಅಜಿತ್ ಪವಾರ್) ಜೊತೆ ಯಾವುದೇ ವೈಮನಸ್ಸು, ಭಿನ್ನಮತ ಇರಲಿಲ್ಲ. ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ. ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವುದು ಅವರ ಕೆಲಸ ಎಂದು ಸುಪ್ರಿಯಾ ಸುಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್, ಪೃಥ್ವಿರಾಜ್ ಚೌವಾಣ್ ಪ್ರಮಾಣವಚನ ತೆಗೆದುಕೊಂಡವರಲ್ಲಿ ಪ್ರಮುಖರಾಗಿದ್ದಾರೆ. ಅಜಿತ್ ಪವಾರ್ ಅವರು ಪ್ರಮಾಣವಚನ ಸ್ವೀಕರಿಸಲು ಹೋದಾಗ ಎನ್ ಸಿಪಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ನೂತನ ಶಾಸಕ ಆದಿತ್ಯ ಠಾಕ್ರೆಗೆ ಸಹ ಸದನದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಕೊಲಂಬ್ಕರ್ ಅವರನ್ನು ನಿನ್ನೆ ರಾಜ್ಯಪಾಲರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ರಾಜ್ಯದಲ್ಲಿ ಕಳೆದ ತಿಂಗಳು ಅಕ್ಟೋಬರ್ 24ರಂದು ವಿಧಾನಸಭೆ ಫಲಿತಾಂಶ ಪ್ರಕಟಗೊಂಡ ನಂತರ ಒಂದು ತಿಂಗಳ ಕಾಲ ನಡೆದ ಮಹಾಡ್ರಾಮಾದ ಬಳಿಕ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಸರ್ಕಾರ ರಚಿಸುತ್ತಿದ್ದು ನಾಳೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ