ಮುಂಬೈ: ಮಹಾರಾಷ್ಟ್ರ ರಾಜಕಾರಣವೀಗ ಶನಿವಾರ ಬೆಳಿಗ್ಗೆಯೇ ಸ್ಟೋಟಕ ತಿರುವು ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್-ಎನ್ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನಾ ಮುಖ್ಯಸ್ಥ ಉದ್ಬವ್ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೀಗ ದಿಢೀರ್ ಬೆಳವಣಿಗೆಯಲ್ಲಿ ಎನ್ಸಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ದೇವೇಂದ್ರ ಪಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ ಎನ್ಸಿಪಿಯ ಅಜಿತ್ ಪವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ತೆಗೆದುಕೊಂಡಿದ್ಧಾರೆ.
ಶನಿವಾರ ಬೆಳಿಗ್ಗೆ ರಾಜಭವನದಲ್ಲಿ ನಡೆದ ಸರಳ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಅವರು ಪ್ರಮಾಣ ವಚನ ಬೋಧಿಸಿದರು.
ಈ ಹಿಂದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾ ಮೈತ್ರಿಕೂಟ ಸರ್ಕಾರ ರಚಿಸಲು ನಿರ್ಧರಿಸಿದ್ದವು.
ನಿನ್ನೆ ಮೂರೂ ಪಕ್ಷಗಳ ಮುಖಂಡರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಣೆ ಮಾಡಿದ್ದರು. ಮೂರು ಪಕ್ಷಗಳ ಮುಖಂಡರು ಸಭೆ ನಡೆಸಿ ಚರ್ಚಿಸಿದ ಬಳಿಕವೇ ಈ ತೀರ್ಮಾನಕ್ಕೆ ಬಂದಿದ್ದರು. ಉದ್ಧವ್ ಠಾಕ್ರೆಯನ್ನು ಸಿಎಂ ಮಾಡಲು ಎಲ್ಲರೂ ಒಪ್ಪಿದ್ಧಾರೆನ್ನಲಾಗಿತ್ತು.
ಸಿಎಂ ವಿಚಾರದಲ್ಲಿ ಯಾವುದೇ ಅಧಿಕಾರ ಹಂಚಿಕೆ ಇರುವುದಿಲ್ಲ. ಉದ್ಧವ್ ಠಾಕ್ರೆ ಅವರೇ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಠಾಕ್ರೆ ಸಿಎಂ ಆಗಲು ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಮ್ಮತದಿಂದ ಸಮ್ಮತಿ ವ್ಯಕ್ತಪಡಿಸಿವೆ. ಮೂರು ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ ಎಂದು ಹೇಳಲಾಗಿತ್ತು. ಆದರೀಗ ಏಕಾಏಕಿ ಬಿಜೆಪಿ ಮತ್ತು ಎನ್ಸಿಪಿ ಮೈತ್ರಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿವೆ.