ಆಂಧ್ರದಲ್ಲಿ ತತ್​ಕ್ಷಣದಿಂದಲೇ ಎಲ್ಲಾ ಬಾರ್ ಲೈಸೆನ್ಸ್ ರದ್ದು; ಹೊಸ ಮದ್ಯ ನೀತಿ ಘೋಷಣೆ

ಅಮರಾವತಿ: ಆಂಧ್ರದಲ್ಲಿ ಬಾರ್​ಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ ಇಂದು ರಾಜ್ಯದ ಎಲ್ಲಾ ಬಾರ್​ಗಳ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ. ಇದರ ಜೊತೆಯಲ್ಲೇ ಹೊಸ ಬಾರ್ ನೀತಿಯನ್ನು ಪ್ರಕಟಿಸಿರುವ ಅವರು, ಮುಂದಿನ ಎರಡು ವರ್ಷದಲ್ಲಿ ಇದನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಆಂಧ್ರದಲ್ಲಿ ಸದ್ಯಕ್ಕೆ ರಾಜ್ಯ ಪಾನೀಯ ನಿಗಮದಿಂದ ನಿರ್ವಹಣೆಯಾಗುತ್ತಿರುವ ಮದ್ಯ ಮಾರಾಟ ಮಳಿಗೆಗಳ ಸಂಖ್ಯೆ 3,500 ಇದೆ. ಈ ಎಲ್ಲಾ ಬಾರ್​ಗಳ ಲೈಸೆನ್ಸನ್ನು ರದ್ದುಗೊಳಿಸಲಾಗಿದೆ. ಈ ಕ್ರಮವು ತತ್​ಕ್ಷಣದಿಂದಲೇ ಜಾರಿಗೆ ಬರಲಿದೆ.

ಸರ್ಕಾರದ ಹೊಸ ಬಾರ್ ನೀತಿಯಂತೆ ಮುಂದಿನ ದಿನಗಳಲ್ಲಿ 479 ಬಾರ್​ಗಳಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಮುಂದಿನ ತಿಂಗಳು ಲಾಟರಿ ಮೂಲಕ ಬಾರ್​ಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಯೋಜಿಸಲಾಗಿದೆ. ಹೊಸ ಬಾರ್ ಲೈಸೆನ್ಸ್​ಗೆ 10 ಲಕ್ಷ ರೂ ನಿಗದಿ ಮಾಡಲಾಗಿದೆ. ಹಾಗೆಯೇ, ಥ್ರೀ-ಸ್ಟಾರ್ ಹೋಟೆಲ್​ಗಳು ಮತ್ತು ಮೈಕ್ರೋ ಬೆವರೇಜ್​ಗಳು ಮದ್ಯ ಮಾರಾಟಕ್ಕೆ ಪರವಾನಿಗೆ ಪಡೆಯಲು 1.5 ಕೋಟಿ ರೂ ತೆರಬೇಕಾಗುತ್ತದೆ.

ಮೇಲೆ ತಿಳಿಸಿದಂತೆ 479 ಬಾರ್​ಗಳಿಗೆ ಲೈಸೆನ್ಸ್ ನೀಡಲಾಗುತ್ತೆ. 38 ಥ್ರೀ-ಸ್ಟಾರ್ ಹೋಟೆಲ್​ಗಳು ಹಾಗೂ ನಾಲ್ಕು ಮೈಕ್ರೋ ಬೆವೆರೇಜ್ ಮಳಿಗೆಗಳಲ್ಲಿ ಆಲ್ಕೋಹಾಲ್ ಲಭ್ಯವಿರಲಿದೆ. ಹೊಸ ಬಾರ್ ನೀತಿಯಂತೆ ಜನವರಿ 1ರಿಂದ ರಾಜ್ಯದಲ್ಲಿ ಬಾರ್​ಗಳು ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ನಿರ್ಬಂಧಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ