ಬೆಂಗಳೂರು, ನ.23-ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಸಿಡಿಮಿಡಿ ವ್ಯಕ್ತಪಡಿಸಿದೆ.
ಕೆಪಿಸಿಸಿಯ ಅಧಿಕೃತ ಟ್ವೀಟರ್ ಖಾತೆಯಿಂದ ಆರಂಭಗೊಂಡು ಪಕ್ಷದ ಹಲವಾರು ನಾಯಕರು ಮಹಾರಾಷ್ಟ್ರ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೊಂದಿಗಿದ್ದರೆ ಅಪವಿತ್ರ ಪವಿತ್ರವಾಗುತ್ತದೆ. ಅತ್ಯಂತ ಗೌಪ್ಯವಾಗಿ ಮಧ್ಯರಾತ್ರಿಯಲ್ಲೂ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗುತ್ತದೆ. ರಾಜಭವನವು ಬಿಜೆಪಿಗಾಗಿ ರಾತ್ರಿಯೆಲ್ಲ ಕೆಲಸ ಮಾಡುತ್ತದೆ. ರಾತ್ರೋರಾತ್ರಿ ಸಮೀಕರಣಗಳು ಬದಲಾಗಿ, ಶಾಸಕರು ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸ್ವಾಯತ್ತ ಸಂಸ್ಥೆಗಳು ಮತ್ತು ಬಿಜೆಪಿ ಸೇರಿ ಸರ್ಕಾರ ರಚನೆ ಮಾಡುತ್ತಿವೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕೇಂದ್ರ ಸರ್ಕಾರ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಭವನ ಕೂಡ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಗುಟ್ಟಾಗಿ ಇಟ್ಟು ಮುಂಜಾನೆ ಪ್ರಮಾಣ ವಚನ ಬೋಧಿಸುವ ಮೂಲಕ ನಿಯಮ ಬಾಹಿರವಾಗಿ ನಡೆದುಕೊಂಡಿದೆ ಎಂದು ಕಿಡಿಕಾರಿದೆ.
ಮಾಜಿ ಸಚಿವ ಕೃಷ್ಣಭೆರೇಗೌಡ ಟ್ವೀಟ್ ಮಾಡಿದ್ದು, ಮುಂಬೈ ರಾಜಕಾರಣ ದೆಹಲಿಯ ಮಾಲಿನ್ಯಕ್ಕಿಂತಲೂ ಹೆಚ್ಚು ಹೊಲಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಬೆಳವಣಿಗೆಯಿಂದ ದೇಶಾದ್ಯಂತ ಕಾಂಗ್ರೆಸ್ ತೀವ್ರ ಆತಂಕಗೊಂಡಂತಿದೆ. ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗುವ ಸಾಧ್ಯತೆ ಇದೆ. ಆದರೆ ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸುವುದನ್ನು ನೋಡಿದರೆ ಬಿಜೆಪಿ ಅಧಿಕಾರಕ್ಕಾಗಿ ಯಾವ ರೀತಿಯ ದಾರಿಗಳನ್ನಾದರೂ ಹಿಡಿಯಲು ಸಿದ್ಧ ಎಂಬುದು ಸಾಬೀತಾಗಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ತೀರಾ ಆತಂಕ ಮೂಡಿಸಿದೆ.