ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯನವರಿಗೆ ಕ್ಷೇತ್ರದ ಮತದಾರರು ಬುದ್ಧಿ ಕಲಿಸಬೇಕು-ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು, ನ.23- ಸುಪ್ರೀಂ ಕೋರ್ಟ್‍ನಿಂದಲೂ ಅನರ್ಹ ಶಾಸಕ ಎಂದು ಛೀಮಾರಿ ಹಾಕಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರಿಗೆ ಈ ಬಾರಿ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಮತದಾರರು ಬುದ್ಧಿ ಕಲಿಸುವುದರ ಜತೆಗೆ ಪ್ರಾಮಾಣಿಕ ವ್ಯಕ್ತಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಅವರನ್ನು ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಲ್ಲಿ ಶಿವರಾಜ್ ಪರ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನ್ನ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್, ವಿದ್ಯಾ ಸಿರಿ, ಮನಸ್ವಿನಿಯಂತಹ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಮ್ಮ ಸರ್ಕಾರ. 14 ತಿಂಗಳ ಕುಮಾರಸ್ವಾಮಿ ಆಡಳಿತ ಮತ್ತು ಯಡಿಯೂರಪ್ಪನವರ ಸರ್ಕಾರ ಇದುವರೆಗೂ ಯಾವುದೇ ಹೊಸ ಯೋಜನೆ ರೂಪಿಸಿಲ್ಲ ಎಂದು ಅವರು ಆರೋಪಿಸಿದರು.

ಯೋಜನೆ ರೂಪಿಸುವ ಬದಲು 30 ಕೋಟಿ ಖರ್ಚು ಮಾಡಿ 17 ಶಾಸಕರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಖರೀದಿಸಿದ್ದಾರೆ. ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಾದರೆ ಪ್ರಾಮಾಣಿಕ ಅಭ್ಯರ್ಥಿ ಶಿವರಾಜ್ ಅವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡರು.

ಈ ಸರ್ಕಾರ ಪತನಗೊಂಡರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದರೆ ಅನ್ನಭಾಗ್ಯ ಯೋಜನೆಯಡಿ ಕಡು ಬಡವರಿಗೆ 10 ಕೆ.ಜಿ. ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸುಳ್ಳು ಹೇಳುವ ಕ್ಯಾಂಪಿಟೇಷನ್ ಇಟ್ಟರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಥಮ ಬಹುಮಾನ ಗೆಲ್ಲುತ್ತಾರೆ. ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳೋದು ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವರಾದ ಕೃಷ್ಣ ಭೆರೇಗೌಡ ಮಾತನಾಡಿ, ಜೆಡಿಎಸ್ ಪಕ್ಷ , ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ವಿಶ್ವಾಸ ದ್ರೋಹ ಮಾಡಿರುವ ಗೋಪಾಲಯ್ಯ ಅವರಿಗೆ ತಕ್ಕ ಪಾಠ ಕಲಿಸಬೇಕಾದರೆ ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿಕೊಂಡರು.

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ , ಮಾಜಿ ಸಚಿವೆ ಮೋಟಮ್ಮ , ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ , ಎಐಸಿಸಿ ವೀಕ್ಷಕ ಜೋಸೆಫ್, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ಬಿಬಿಎಂಪಿ ಸದಸ್ಯ ಕೇಶವಮೂರ್ತಿ ಸೇರಿದಂತೆ ಹಲವಾರು ಹಿರಿಯ ಮುಖಂಡರು ಕ್ಷೇತ್ರದಾದ್ಯಂತ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪಾಲ್ಗೊಂಡು ಶಿವರಾಜ್ ಪರ ಮತ ಯಾಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ