ವಾಷಿಂಗ್ಟನ್: ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಮೆರಿಕಾ ಸದನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಅಮೆರಿಕಾ ನಿರ್ಣಯವನ್ನು ಜಾರಿಗೆ ತಂದಿದೆ.
ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಭಾರತ ಮತ್ತು ಪಾಕಿಸ್ತಾನಗಳು ವಿವಾದಿತ ಪ್ರದೇಶಗಳ ಸ್ಥಿತಿಗತಿಗಳನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಬೇಕೆಂದು ಹೇಳಿದೆ.
ಯುಎಸ್ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಇಬ್ಬರು ಮುಸ್ಲಿಂ ಮಹಿಳೆಯರಾದ ರಶೀದಾ ತ್ಲಲಿಬ್ ಮತ್ತು ಇಹಾನ್ ಒಮರ್ 724 ಸಂಖ್ಯೆಯ ನಿರ್ಣಯವನ್ನು ನಿನ್ನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮಂಡಿಸಿ ಪಾಕಿಸ್ತಾನ ಮತ್ತು ಭಾರತ ದೇಶಗಳು ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಭಾರತ, ಕಳೆದ ಆಗಸ್ಟ್ 5ರಂದು ಸಂವಿಧಾನ ವಿಧಿ 370ನ್ನು ತೆಗೆದುಹಾಕಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತು.
ಇದಕ್ಕೆ ಪಾಕಿಸ್ತಾನ ಕಟುವಾಗಿ ವಿರೋಧಿಸುತ್ತಾ ಬಂದಿದ್ದು ದ್ವಿಪಕ್ಷೀಯ ಸಂಬಂಧವನ್ನು ತಳ್ಳಿಹಾಕಿ ಭಾರತದ ರಾಯಭಾರಿಯನ್ನು ಕೂಡ ಹೊರಹಾಕಿದೆ. ಅಲ್ಲದೆ ಭಾರತದ ನಿರ್ಣಯವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಖಂಡಿಸಿರುವ ಪಾಕಿಸ್ತಾನ ಈ ವಿಚಾರದಲ್ಲಿ ವಿವಾದ ಬಗೆಹರಿಸಲು ಅಂತಾರಾಷ್ಟ್ರೀಯ ಸಮೂಹಗಳು ಮುಂದಾಗಬೇಕೆಂದು ಕೋರಿಕೊಂಡಿತ್ತು.
ಆದರೆ ಸಂವಿಧಾನ ವಿಧಿ 370 ರದ್ದುಪಡಿಸಿದ್ದು ಸಂಪೂರ್ಣವಾಗಿ ಆಂತರಿಕ ವಿಷಯವಾಗಿದ್ದು ಪಾಕಿಸ್ತಾನ ವಾಸ್ತವತೆಯನ್ನು ಅರ್ಥಮಾಡಿಕೊಂಡು ಭಾರತದ ವಿರುದ್ಧ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಭಾರತ ಖಡಾಖಂಡಿತವಾಗಿ ಹೇಳಿದೆ.