ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕು- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.23- ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಎನ್‍ಸಿಪಿ-ಶಿವಸೇನೆ ಸರ್ಕಾರ ರಚನೆ ಮಾಡುತ್ತಾರೆ ಎನ್ನಲಾಗುತ್ತಿತ್ತು. ಇಂದು ಇದ್ದಕ್ಕಿದ್ದ ಹಾಗೆ ಬಿಜೆಪಿ-ಎನ್‍ಸಿಪಿ ಸರ್ಕಾರ ರಚನೆಯಾಗಿದೆ. ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ಬಂದವರು. ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ನೋಡಿದರೆ ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ ಎಂದರು.

ಬಿಜೆಪಿ ವಿರುದ್ಧದ ಮತವನ್ನು ಎನ್‍ಸಿಪಿ ಪಡೆದಿತ್ತು. ಈಗ ಆ ಪಕ್ಷವೇ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದೆ. ಎಲ್ಲರೂ ಅವಕಾಶವಾದಿಗಳಾಗಿದ್ದು , ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಜತೆ ಸೇರಿದ್ದರು. ಆನಂತರ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದ್ದರು.

ಮಹಾರಾಷ್ಟ್ರದಲ್ಲಿ ಅಗತ್ಯವಿರುವ ಸ್ಥಾನವನ್ನು ಬಿಜೆಪಿ-ಎನ್‍ಸಿಪಿ ಹೊಂದಿದೆ. ಕೆಲ ಕಾಲ ಈ ಸರ್ಕಾರ ಆಡಳಿತ ನಡೆಸಬಹುದು. ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕಾರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಣ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ