ಮಹಾ ಶಾಕ್ ; ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ, ಶಿವಸೇನೆಗೆ ಭಾರೀ ಮುಖಭಂಗ

ಮುಂಬೈ: ಮಹಾರಾಷ್ಟ್ರ ರಾಜಕಾರಣವೀಗ ಶನಿವಾರ ಬೆಳಿಗ್ಗೆಯೇ ಸ್ಟೋಟಕ ತಿರುವು ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನಾ ಮುಖ್ಯಸ್ಥ ಉದ್ಬವ್​ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೀಗ ದಿಢೀರ್​​ ಬೆಳವಣಿಗೆಯಲ್ಲಿ ಎನ್​​ಸಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ದೇವೇಂದ್ರ ಪಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ ಎನ್​​ಸಿಪಿಯ ಅಜಿತ್​​ ಪವರ್​​​​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ತೆಗೆದುಕೊಂಡಿದ್ಧಾರೆ.

ಶನಿವಾರ ಬೆಳಿಗ್ಗೆ ರಾಜಭವನದಲ್ಲಿ ನಡೆದ ಸರಳ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಭಗತ್​ ಸಿಂಗ್​​ ಕೋಶಿಯಾರ್​ ಅವರು ಪ್ರಮಾಣ ವಚನ ಬೋಧಿಸಿದರು.

ಈ ಹಿಂದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ-ಎನ್​​ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾ ಮೈತ್ರಿಕೂಟ ಸರ್ಕಾರ ರಚಿಸಲು ನಿರ್ಧರಿಸಿದ್ದವು.

ನಿನ್ನೆ ಮೂರೂ ಪಕ್ಷಗಳ ಮುಖಂಡರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಣೆ ಮಾಡಿದ್ದರು. ಮೂರು ಪಕ್ಷಗಳ ಮುಖಂಡರು ಸಭೆ ನಡೆಸಿ ಚರ್ಚಿಸಿದ ಬಳಿಕವೇ ಈ ತೀರ್ಮಾನಕ್ಕೆ ಬಂದಿದ್ದರು. ಉದ್ಧವ್ ಠಾಕ್ರೆಯನ್ನು ಸಿಎಂ ಮಾಡಲು ಎಲ್ಲರೂ ಒಪ್ಪಿದ್ಧಾರೆನ್ನಲಾಗಿತ್ತು.

ಸಿಎಂ ವಿಚಾರದಲ್ಲಿ ಯಾವುದೇ ಅಧಿಕಾರ ಹಂಚಿಕೆ ಇರುವುದಿಲ್ಲ. ಉದ್ಧವ್ ಠಾಕ್ರೆ ಅವರೇ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಠಾಕ್ರೆ ಸಿಎಂ ಆಗಲು ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಮ್ಮತದಿಂದ ಸಮ್ಮತಿ ವ್ಯಕ್ತಪಡಿಸಿವೆ. ಮೂರು ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ ಎಂದು ಹೇಳಲಾಗಿತ್ತು. ಆದರೀಗ ಏಕಾಏಕಿ ಬಿಜೆಪಿ ಮತ್ತು ಎನ್​​ಸಿಪಿ ಮೈತ್ರಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ