ನವದೆಹಲಿ: ಇಂಧನ, ಟೆಲಿಕಾಂ, ರೀಟೇಲ್ ಹೀಗೆ ನಾನಾ ಉದ್ಯಮ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟಿಷ್ ಮಲ್ಟಿನ್ಯಾಷನಲ್ ಆಯಿಲ್ ಮತ್ತು ಗ್ಯಾಸ್ ಕಂಪನಿಯಾಗಿರುವ ಬಿಪಿ (ಬ್ರಿಟಿಷ್ ಪೆಟ್ರೋಲಿಯಂ) ಅನ್ನು ಹಿಂದಿಕ್ಕುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಇಂಧನ ಕಂಪನಿಗಳಲ್ಲಿ ಎಕ್ಸಾನ್ ಮೊಬಿಲ್, ಶೆಲ್, ಶೆವ್ರಾನ್ ಕಾರ್ಪ್, ಟೋಟಲ್, ಪೆಟ್ರೋಚಿನಾ ನಂತರದ ಸ್ಥಾನದಲ್ಲಿದ್ದ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯನ್ನು ಹಿಂದಿಕ್ಕುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ 6ನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಆರ್ಐಎಲ್ ಮತ್ತೊಂದು ಸಾಧನೆ ಮಾಡಿದೆ. ಈಗಾಗಲೇ 10 ಲಕ್ಷ ಕೋಟಿ ಮಾರ್ಕೆಟ್ ವ್ಯಾಲ್ಯೂ ಹೊಂದುವತ್ತ ದಾಪುಗಾಲು ಹಾಕುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಜಗತ್ತಿನ 6ನೇ ಅತಿದೊಡ್ಡ ಇಂಧನ ಸಂಸ್ಥೆಯಾಗಿರುವ ಬಿಪಿ ಪಿಎಲ್ಸಿಯನ್ನು ಹಿಂದೆ ಹಾಕಿ ಮುನ್ನಡೆ ಸಾಧಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ 58 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲಿಬಾಬಾ ಕಂಪನಿಯ ಮುಖ್ಯಸ್ಥ ಜಾಕ್ ಮಾ 42.8 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ 2ನೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಮುಖೇಶ್ ಅಂಬಾನಿ 1ನೇ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಅಲಿಬಾಬಾ ಗ್ರೂಪ್ನ ಜಾಕ್ ಮಾ, 3ನೇ ಸ್ಥಾನದಲ್ಲಿ ಟೆನ್ಸೆಂಟ್ ಹೋಲ್ಡಿಂಗ್ಸ್ನ ಮಾ ಹುವಾಟೆಂಗ್ ಇದ್ದಾರೆ.
ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಜಗತ್ತಿನ 12ನೇ ಶ್ರೀಮಂತ ಉದ್ಯಮಿ ಕೂಡ ಹೌದು. ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ ಬಿಲ್ ಗೇಟ್ಸ್ ಮೊದಲ ಸ್ಥಾನದಲ್ಲಿದ್ದರೆ, ಅಮೇಜಾನ್ನ ಜೆಫ್ ಬೆಜೋಸ್, ಎಲ್ವಿಎಂಎಚ್ ಗ್ರೂಪ್ನ ಬರ್ನಾರ್ಡ್ ಅರ್ನಾಲ್ಟ್, ಬರ್ಕ್ಶೈರ್ ಹಾತ್ವೇಸ್ನ ವಾರೆನ್ ಬಫೆಟ್, ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಟಾಪ್ 5ನೇ ಸ್ಥಾನದಲ್ಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಹಿಂದಿನ ವರ್ಷದ ಲಾಭದ ಪ್ರಮಾಣ ಶೇ. 03ರಷ್ಟು ಏರಿತ್ತು. ಮುಕೇಶ್ ಅಂಬಾನಿ ಮಾಲಿಕತ್ವದ ಆರ್ಐಎಲ್ ಸಂಸ್ಥೆ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು. ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು. ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ರಿಲಯನ್ಸ್ನ ಜಿಯೋ ಕೂಡ ಉತ್ತಮ ಲಾಭ ಗಳಿಸಿದೆ. ಏಪ್ರಿಲ್-ಮೇ-ಜೂನ್ ತ್ರೈಮಾಸಿಕದಲ್ಲಿ ಜಿಯೋ 612 ಕೋಟಿ ರೂ. ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಹೊಂದಿದ್ದ ಜಿಯೋದ ಲಾಭ ಗಳಿಕೆ ಈ ಬಾರಿ ಶೇ. 20ರಷ್ಟು ಹೆಚ್ಚಳವಾಗಿದೆ.