ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಈಗ ಎಚ್ಡಿಕೆ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಿರುವ ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಬಲವೇ ಇಲ್ಲ. ಆದಾಗ್ಯೂ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೆಳೆದು, ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ರಮೇಶ್ ಜಾರಕಿಹೊಳಿ ಸೋಲಿಸಲು ಎಚ್ಡಿಕೆ ಮುಂದಾಗಿದ್ದಾರೆ.
ಜೆಡಿಎಸ್ ನಿಂದ ಅಶೋಕ್ ಪೂಜಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಮೂಲತಃ ಬಿಜೆಪಿ ಆಗಿರುವ ಇವರು ಗೋಕಾಕ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಬಿಜೆಪಿಯಲ್ಲಿ ಅನರ್ಹ ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ನಿಂದ ಟಿಕೆಟ್ ಸಿಗಬಹುದು ಅಂದುಕೊಂಡಿದ್ದರು. ಆದರೆ, ಕಾಂಗ್ರೆಸ್ ಲಖನ್ ಜಾರಕಿಹೊಳಿಗೆ ಮಣೆ ಹಾಕಿತ್ತು. ಹೀಗಾಗಿ ಅಶೋಕ್ರನ್ನು ಜೆಡಿಎಸ್ನಿಂದ ಕಣಕ್ಕೆ ಇಳಿಸುತ್ತಿದ್ದಾರೆ ಕುಮಾರಸ್ವಾಮಿ.
ಇಂದು ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆಯಲ್ಲಿ ಎಚ್ಡಿಕೆ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಶೋಕ್ ಪೂಜಾರಿ ಪರ ಅವರು ಮತಯಾಚನೆ ಮಾಡಲಿದ್ದಾರೆ.