ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ

ನವದೆಹಲಿ: ನ್ಯಾ. ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ  ನ್ಯಾ. ಶರದ್ ಅರವಿಂದ ಬೋಬ್ಡೆ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಮುಖ್ಯ ನ್ಯಾಯಮೂರ್ತಿ ಎಸ್​ಎ ಬೋಬ್ಡೆ ಅವರಿಗೆ ಪ್ರಮಾಣವಚನ ಬೋಧಿಸಿದರು.

ಭಾನುವಾರ ನಿವೃತ್ತಿ ಹೊಂದಿದ್ದ ನ್ಯಾ. ರಂಜನ್ ಗೊಗೋಯ್ ತಮ್ಮ ಸ್ಥಾನಕ್ಕೆ ನ್ಯಾ. ಬೋಬ್ಡೆ ಅವರನ್ನು ಶಿಫಾರಸು ಮಾಡಿದ್ದರು. ಸುಪ್ರೀಂಕೋರ್ಟ್​ನಲ್ಲಿರುವ ನ್ಯಾಯಮೂರ್ತಿಗಳಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿರುವ ಶರದ್ ಬೋಬ್ಡೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನ್ಯಾ. ಬೋಬ್ಡೆ ಅವರು ಇನ್ನು 18 ತಿಂಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. 2021ರ ಏಪ್ರಿಲ್ 23ಕ್ಕೆ ಬೋಬ್ಡೆ ನಿವೃತ್ತಿ ಹೊಂದಲಿದ್ದಾರೆ.
ನ್ಯಾ. ರಂಜನ್ ಗೊಗೋಯ್ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ  ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಅವರ ಸೇವಾ ಹಿರಿತನದ ಆಧಾರದ ಮೇಲೆ ಸಿಜೆಐ ಅವರು ಹೆಸರು ಶಿಫಾರಸು ಮಾಡಿದ್ದರು.
ನ್ಯಾ. ಶರದ್ ಅರವಿಂದ ಬೋಬ್ಡೆ 1956 ಏ.24ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಬಾಂಬೆ ಹೈಕೋರ್ಟ್​ನಲ್ಲಿ 2000-2012ರವರೆಗೆ ನ್ಯಾಯಮೂರ್ತಿಯಾಗಿ ಎಸ್​ಎಸ್​ ಬೋಬ್ಡೆ ಕಾರ್ಯ ನಿರ್ವಹಿಸಿದ್ದರು. ನಂತರ 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2013ರಲ್ಲಿ ಇವರು ಸುಪ್ರೀಂಕೋರ್ಟ್​​ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
2018 ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಂಜನ್ ಗೊಗೋಯ್ ಅಧಿಕಾರ ಸ್ವೀಕರಿಸಿದ್ದರು. ಅವರು ನವೆಂಬರ್ 17ರಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯಾಗಿ ಶರದ್ ಹೆಸರನ್ನು ಶಿಫಾರಸು ಮಾಡಿದ್ದರು. ಇದಕ್ಕೆ ಈಗ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದು, ಇಂದು ಶರದ್ ಬೋಬ್ಡೆ​ ಅಧಿಕಾರ ಸ್ವೀಕರಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ