ಚಳಿಗಾಲ ಅಧಿವೇಶನಕ್ಕೂ ಮುನ್ನ ಸರ್ವ ಪಕ್ಷಗಳ ಸಭೆ ಕರೆದ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಸೋಮವಾರದಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನದ ಹಿನ್ನಲೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಸುಗಮ ಕಾರ್ಯಕ್ಕಾಗಿ ಸದನದಲ್ಲಿ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಸಂಸತ್ತು ಗ್ರಂಥಾಲಯ ಕಟ್ಟಡದಲ್ಲಿ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಸರ್ಕಾರ ತನ್ನ ಶಾಸಕಾಂಗ ಕಾರ್ಯಸೂಚಿಗೆ ಒತ್ತು ನೀಡುವ ನಿರೀಕ್ಷೆಯಿದ್ದರೆ, ಡಿಸೆಂಬರ್ 13 ರವರೆಗೆ ಮುಂದುವರಿಯಲಿರುವ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತಮ್ಮ ಕಾಳಜಿಯ ಸಮಸ್ಯೆಗಳನ್ನು ಎತ್ತುವ ಸಾಧ್ಯತೆಯಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ನವೆಂಬರ್ 17 ರಂದು ಸರ್ವಪಕ್ಷ ಸಭೆ ಕರೆಯಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿವೇಶನದಲ್ಲಿ ಹಲವಾರು ಮಸೂದೆಗಳನ್ನು ಒಳಗೊಂಡಂತೆ ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ಮುಂದಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ಮಸೂದೆಗಳಲ್ಲಿ ದೆಹಲಿಯ 1,728 ಅನಧಿಕೃತ ವಸಾಹತುಗಳನ್ನು ಕ್ರಮಬದ್ಧಗೊಳಿಸುವುದು ಸೇರಿದೆ . ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡುವ ಜನರಿಗೆ ದಂಡ ವಿಧಿಸುವ ಮಸೂದೆಯನ್ನು ಅಧಿವೇಶನದಲ್ಲಿ ತರಬಹುದು ಎನ್ನಲಾಗಿದೆ.

ಕಾರ್ಪೊರೇಟ್ ತೆರಿಗೆ ದರ ಕಡಿತ ಮತ್ತು ಇ-ಸಿಗರೆಟ್ ನಿಷೇಧದ ಎರಡು ಸುಗ್ರೀವಾಜ್ಞೆಗಳನ್ನು ಬದಲಿಸಲು ಸರ್ಕಾರವು ಮಸೂದೆಗಳನ್ನು ತರಲಿದೆ. ಪ್ರಧಾನಿ ನರೇಂದ್ರ ಮೋದಿ ಸತತ ಎರಡನೇ ಅವಧಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ  ನಡೆಯುತ್ತಿರುವ ಎರಡನೇ ಅಧಿವೇಶನವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ