ಇಸ್ಲಾಮಾಬಾದ್, ನ.15-ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಮತ್ತೆ ತಗಾದೆ ತೆಗೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಯಾವುದೇ ರೀತಿ ಒಪ್ಪಂದವಿಲ್ಲ ಎಂದು ಪಾಕ್ ಸರ್ಕಾರ ಹೇಳಿದೆ.
ಇದರಿಂದಾಗಿ ಜಾಧವ್ ಪ್ರಕರಣದಲ್ಲಿ ಭಾರತ ಮತ್ತು ಪಾಕ್ ನಡುವಣ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನಿರ್ಧಾರವನ್ನು ಜಾರಿಗೊಳಿಸುವುದಕ್ಕೆ ಕೈಗೊಳ್ಳುವ ಕ್ರಮಗಳು ತನ್ನ ಸಂವಿಧಾನದ ಪ್ರಕಾರವಾಗಿಯೇ ಇರುತ್ತದೆ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.
ಜಾಧವ್ ಪ್ರಕರಣವನ್ನು ಮರುಪರಿಶೀಲನೆ ಮಾಡಲು ಪಾಕಿಸ್ತಾನ ಕಾನೂನಿನ ಬೇರೆ ಬೇರೆ ಆಯ್ಕೆಗಳನ್ನು ಪರಿಗಣಿಸುತ್ತಿದೆ ಎಂದು ಪಾಕಿಸ್ತಾನದ ಸೇನೆ ಹೇಳಿತ್ತು. ಈ ಬೆನ್ನಲ್ಲೇ ಪಾಕ್ನ ವಿದೇಶಾಂಗ ವಕ್ತಾರ ಮೊಹಮ್ಮದ್ ಫೈಸಲ್ ಸ್ಪಷ್ಟನೆ ನೀಡಿದ್ದಾರೆ.
ನೆದರ್ಲ್ಯಾಂಡ್ಸ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ರನ್ನು ನೇಣುಗಂಬದಿಂದ ಪಾರು ಮಾಡಲು ಭಾರತ ನಡೆಸುತ್ತಿರುವ ಕಾನೂನು ಸಂಘರ್ಷ ಸಫಲ ದಿಕ್ಕಿನಲ್ಲಿ ಸಾಗುತ್ತಿದ್ದು, ಅಂತಿಮ ನಿರ್ಧಾರ ಹೊರಬೀಳಬೇಕಿದೆ.