ಮೈಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿದ್ದ ಸಾವಿರಾರು ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಬರೋಬ್ಬರಿ 30 ಸಾವಿರ ಸೀರೆಗಳನ್ನು ಇಡಲಾಗಿತ್ತು. ಇದರ ಖಚಿತ ಮಾಹಿತಿ ಪಡೆದ ಚುನಾವಣಾ ಅಯೋಗದ ಅಧಿಕಾರಿಗಳು ಪೊಲೀಸರ ಸಹಿತ ದಾಳಿ ಮಾಡಿ ತಕ್ಷಣವೇ ಸೀರೆಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಸೀರೆಯ ಜೊತೆಗೆ ಬಿಜೆಪಿಯಿಂದ ಸ್ಫರ್ಧಿಸಲಿದ್ದಾರೆ ಎಂಬ ಹಿನ್ನೆಲೆ ಸಿ.ಪಿ ಯೋಗೇಶ್ವರ್ಗೆ ಮತ ಹಾಕಿ ಎಂದು ಮುದ್ರಿಸಿದ್ದ ಕರಪತ್ರಗಳಿದ್ದವು.
ಬಿಳಿಯ ಚೀಲಗಳಲ್ಲಿ ಕಂತೆಗಟ್ಟಲೆ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಸಾವಿರಾರು ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿಗೂ ಮುನ್ನವೇ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಗಾಢವಾಗಿ ಹಬ್ಬಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ಕೈಗೊಂಡಿದ್ದರು, ಆದರೆ ಸದ್ಯ ಬಿಜೆಪಿಗೆ ಸೇರ್ಪಡೆಗೊಂಡಿರುವ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರೇ ಸ್ಪರ್ಧಿಸಲಿದ್ದಾರೆನ್ನಲಾಗಿದೆ.