ಚೀನಾದಲ್ಲಿ 2020ರಲ್ಲಿ ಮೂರನೇ ಅನೌಪಚಾರಿಕ ಸಭೆ-ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಬ್ರೆಸಿಲಿಯಾ, ನ.15-ಚೀನಾದಲ್ಲಿ 2020ರಲ್ಲಿ ನಡೆಯಲಿರುವ ಮೂರನೇ ಅನೌಪಚಾರಿಕ ಸಭೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಹ್ವಾನಿಸಿರುವುದು ಉಭಯ ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಬಲವರ್ಧನೆಗೆ ನಾಂದಿಯಾಗಿದೆ.

ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಒಕ್ಕೂಟ) ಸಮಾವೇಶದಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಜಿನ್ ಪಿಂಗ್ ಭೇಟಿಯಾಗಿ ಮಾತುಕತೆ ನಡೆಸಿದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಮಹತ್ವದ ಶೃಂಗಸಭೆ ನಂತರ ಉಭಯ ನಾಯಕರು ಬ್ರೆಜಿಲ್‍ನಲ್ಲಿ ಎರಡನೇ ಬಾರಿ ಭೇಟಿಯಾಗಿ ಸಮಾಲೋಚಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಭಾರತದ ಜನರ ಆತಿಥ್ಯವನ್ನು ಮರೆಯಲಾಗುವುದಿಲ್ಲ ಎಂದು ಚೆನ್ನೈಯಲ್ಲಿ ನಡೆದ ಭಾರತ – ಚೀನಾ ನಡುವಿನ ಎರಡನೇ ಅನೌಪಚಾರಿಕ ಸಭೆ ಕುರಿತು ಕ್ಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ಚೀನಾದಲ್ಲಿ 2020ರಲ್ಲಿ ನಡೆಯಲಿರುವ ಮೂರನೇ ಅನೌಪಚಾರಿಕ ಸಭೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು.

ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಕುರಿತಂತೆ ನಿಕಟ ಬಾಂಧವ್ಯದ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. ವ್ಯಾಪಾರ ಮತ್ತು ಆರ್ಥಿಕತೆ ಕುರಿತ ಉನ್ನತ ಮಟ್ಟದ ನಿಯೋಗ ಶೀಘ್ರವೇ ಸಭೆ ಸೇರಬೇಕೆಂದು ಇಬ್ಬರು ನಾಯಕರೂ ಅಭಿಪ್ರಾಯಪಟ್ಟರು.

ಮುಂದಿನ ವರ್ಷ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 70 ನೇ ವರ್ಷಾಚರಣೆಗೆ ಸಿದ್ಧತೆಗಳನ್ನು ಮೋದಿ – ಕ್ಸಿ ಪರಾಮರ್ಶಿಸಿದರು.

ಗಡಿ ಕುರಿತಂತೆ ವಿಶೇಷ ಪ್ರತಿನಿಧಿಗಳು ಮತ್ತೆ ಸಭೆ ನಡೆಸಲಿದ್ದಾರೆ ಎಂಬುದನ್ನೂ ನಾಯಕರು ತಿಳಿಸಿ, ಗಡಿಯಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು ಅಗತ್ಯ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ