
ಬೆಂಗಳೂರು, ನ.15- ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಇಂದು ತಮ್ಮ ಆಪ್ತ ಸಚಿವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರ ಆಪ್ತರೊಂದಿಗೆ ಉಪಚುನಾವಣೆಯಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಚಿಂತನಮಂಥನ ನಡೆಸಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಡಿ.5ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ ಕಣಕ್ಕಿಳಿಯಲಿದ್ದಾರೆ.
ಸೋಮವಾರ 15 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.
ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಹೇಳಿಕೇಳಿ ಈ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆ. ಇದನ್ನು ಛಿದ್ರ ಮಾಡಲು ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ಸಿಎಂ ಬಿಎಸ್‍ವೈ ಸಚಿವರಿಂದ ಅಭಿಪ್ರಾಯ ಹಂಚಿಕೊಂಡರು.
ಇದೇ ರೀತಿ ತಮಗೆ ನಿಗದಿಪಡಿಸಿರುವ ಸಚಿವರು ಮತ್ತು ಉಸ್ತುವಾರಿಗಳು ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಬೀಡುಬಿಟ್ಟು ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕೆಂದು ಕಟ್ಟಪ್ಪಣೆ ವಿಧಿಸಿದ್ದಾರೆ.