ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಹಿನ್ನಲೆ-ನಾನು ರಾಣಿಬೆನ್ನೂರಿನಿಂದ ಸ್ಪರ್ಧಿಸುವುದಿಲ್ಲ- ಮಾಜಿ ಸಚಿವ ಆರ್.ಶಂಕರ್

ಬೆಂಗಳೂರು,ನ.15- ನನ್ನನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಸ್ಥಾನ ಕೊಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿರುವುದರಿಂದ ನಾನು ರಾಣಿಬೆನ್ನೂರಿನಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದ್ದಾರೆ.

ಈ ದಿಢೀರ್ ಬೆಳವಣಿಗೆಯಿಂದ ರಾಣೆಬೆನ್ನೂರಿನಲ್ಲಿ ಬಿಜೆಪಿಗೆ ಎದುರಾಗಿದ್ದ ಕಂಟಕ ಮೊದಲ ಹಂತದಲ್ಲೇ ನಿವಾರಣೆಯಾಗಿದೆ.

ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿಯಾದ ಆರ್.ಶಂಕರ್ ಮಾತುಕತೆ ನಡೆಸಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವ ತೀರ್ಮಾನಕ್ಕೆ ಬಂದರು.

ಒಂದು ಹಂತದಲ್ಲಿ ನನಗೆ ಟಿಕೆಟ್ ಕೊಡದಿದ್ದರೆ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ತೀರ್ಮಾನದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು.

ಆದರೆ ಸಿಎಂ ಬಿಎಸ್‍ವೈ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು. ಉಪಚುನಾವಣೆಯಲ್ಲಿ ನೀವು ಸೋಲುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಹೀಗಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಗತ್ಯವಿದೆ. ನಿಮ್ಮನ್ನು ಮೇಲ್ಮನೆಗೆ ಆಯ್ಕೆ ಮಾಡಿ ಮಂತ್ರಿ ಮಾಡುವೆ ನನ್ನ ಮಾತಿನಲ್ಲಿ ನಂಬಿಕೆ ಇರಲಿ ಎಂದು ಸಲಹೆ ಮಾಡಿದರು.

ದುಡುಕಿನಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ. ನನ್ನ ಮಾತಿನಲ್ಲಿ ನಂಬಿಕೆಯಿಟ್ಟು ಉಪಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿ. ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡಲಾಗುವುದು. ಕೊಟ್ಟ ಮಾತಿನಂತೆ ಮಂತ್ರಿ ಮಾಡುತ್ತೇನೆ ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಹೀಗೆ ಯಡಿಯೂರಪ್ಪನವರಿಂದಲೇ ಭರವಸೆ ಸಿಕ್ಕ ಕಾರಣ ಶಂಕರ್ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ.

ತಿರುಗಿಬಿದ್ದ ಬೆಂಬಲಿಗರು:
ಆರ್.ಶಂಕರ್ ದ್ವಂದ್ವ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಅವರ ಬೆಂಬಲಿಗರು ತಿರುಗಿಬಿದ್ದ ಪ್ರಸಂಗವೂ ಜರುಗಿದೆ. ಮೊದಲು ಟಿಕೆಟ್ ಕೊಡದಿದ್ದರೆ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.

ಯಾವಾಗ ಯಡಿಯೂರಪ್ಪ ಮಂತ್ರಿ ಸ್ಥಾನದ ಭರವಸೆ ಕೊಟ್ಟರೋ ಶಂಕರ್ ಉಲ್ಟಾ ಹೊಡೆದರು. ಇದರಿಂದ ಅವರ ಬೆಂಬಲಿಗರು , ನೀವು ಹೇಳುವುದೊಂದು ಮಾಡುವುದೊಂದು ಎಂದು ಅವರ ವಿರುದ್ಧವೇ ಅಸಮಾಧಾನ ಹೊರ ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ