ಬೆಂಗಳೂರು, ನ.15-ಪಕ್ಷೇತರ ಅನರ್ಹ ಶಾಸಕ ಆರ್ ಶಂಕರ್ಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಬೆನ್ನಲ್ಲೇ ರಾಣೆಬೆನ್ನೂರಿನ ಟಿಕೆಟ್ಗಾಗಿ ಹಲವು ಬಿಜೆಪಿ ಮುಖಂಡರ ನಡುವೆ ಪೈಪೋಟಿ ನಡೆದಿದೆ.
ಮಾಜಿ ಶಾಸಕ ಶಿವರಾಜ್ ಸಜ್ಜನ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಜಂಬಗಿ , ಹಿರಿಯ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ನಡುವೆ ಟಿಕೆಟ್ಗಾಗಿ ಸ್ಪರ್ಧೆ ಏರ್ಪಟ್ಟಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಯಾರು ಉತ್ತಮ ಅಭ್ಯರ್ಥಿ ಎನ್ನುವುದರ ಬಗ್ಗೆ ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.
15 ಕ್ಷೇತ್ರಗಳ ಉಪಚುನಾವಣೆಗೆ 13 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಿದ ಬಿಜೆಪಿಗೆ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕೆನ್ನುವ ಬಗ್ಗೆ ತೀವ್ರ ಗೊಂದಲ ಉಂಟಾಗಿದೆ. ಕೊನೆ ಕ್ಷಣದಲ್ಲಿ ಅನರ್ಹ ಪಕ್ಷೇತರ ಶಾಸಕ ಆರ್.ಶಂಕರ್ಗೆ ಟಿಕೆಟ್ ನೀಡದಿರಲು ತೀರ್ಮಾನಿಸಿರುವ ಬಿಜೆಪಿಗೆ ಆಕಾಂಕ್ಷಿಗಳ ತೀವ್ರ ಪೈಪೋಟಿಯಿಂದ ಅಭ್ಯರ್ಥಿ ಆಯ್ಕೆ ಮಾಡುವುದು ಕಗ್ಗಂಟಾಗಿದೆ.
ಮಾಜಿ ಶಾಸಕರಾದ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಸಜ್ಜನ್, ತಮಗೆ ಟಿಕೆಟ್ ನೀಡುವಂತೆ ಸಿಎಂ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ಗೆ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಜಂಬಗಿ ಸಹ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಣೆಬೆನ್ನೂರಲ್ಲಿ ಲಿಂಗಾಯತ ಸಮುದಾಯದವರೇ ನಿರ್ಣಾಯಕರಾಗಿದ್ದಾರೆ. ಪಂಚಮಸಾಲಿ ಪಂಗಡಕ್ಕೆ ಸೇರಿದ ತಮಗೆ ಅವಕಾಶ ನೀಡಿದರೆ ಪಕ್ಷ ಗೆಲ್ಲಲು ಹೆಚ್ಚು ಸಹಾಯಕವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಒಬಿಸಿಗೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಸುಲಭವಾಗಿ ಗೆಲ್ಲುವ ಕ್ಷೇತ್ರವನ್ನು ಪಕ್ಷ ಕಳೆದುಕೊಳ್ಳಬೇಕಾಯಿತು. ಈ ಬಾರಿಯೂ ಟಿಕೆಟ್ ನೀಡಿಕೆಯಲ್ಲಿ ತಪ್ಪು ನಿರ್ಧಾರ ತಗೆದುಕೊಳ್ಳಬಾರದು. ತಮಗೆ ಟಿಕೆಟ್ ನೀಡುವಂತೆ ಭಾರತಿ ಜಂಬಗಿ ವಾದ ಮಂಡಿಸಿದ್ದಾರೆ.ಆರ್.ಶಂಕರ್ಗೆ ಟಿಕೆಟ್ ನೀಡದಿದ್ದರೆ ಪರ್ಯಾಯವಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು.
ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸಿದ ತಮ್ಮನ್ನು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಬಾರದೆಂದು ಹೇಳಿರುವ ಬಿಜೆಪಿ ಕಾರ್ಯದರ್ಶಿ ಭಾರತಿ ಜಂಬಗಿ, ಲಿಂಗಾಯತರ ನಂತರ ಹೆಚ್ಚು ಮತದಾರರನ್ನು ಹೊಂದಿರುವ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಪುತ್ರ ಕಾಂತೇಶ್ ಗೆ ನೀಡಿದರೆ ಉತ್ತಮವೆಂದು ಹಿರಿಯ ಸಚಿವ ಕೆಎಸ್ ಈಶ್ವರಪ್ಪ ಸಿಎಂ ಹಾಗೂ ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡ ಹಾಕಿದ್ದಾರೆ. ರಾಣೆಬೆನ್ನೂರಿನಲ್ಲಿ ಯಾರಿಗೆ ಟಿಕೆಟ್ ನೀಡಿದರೆ ಒಳಿತು ಎಂಬ ಬಗ್ಗೆ ಎಲ್ಲ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪಡೆಯುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಡಾ.ತೇಲಗಾರ್ ಆಯ್ಕೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ.