ಬೆಂಗಳೂರು,ನ.14- ನಿರ್ಣಾಯಕವಾಗಿರುವ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಭಿನ್ನಮತೀಯರು ತೊಡರುಗಾಲಾಗಿ ಪರಿಣಮಿಸಿರುವುದು ನುಂಗಲಾರದ ತುತ್ತಾಗಿದೆ.
ಸುಮಾರು 5ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತ ಉಂಟಾಗಿದ್ದು , ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಬಂಡಾಯಗಾರರು ಕಣಕ್ಕಿಳಿಯಲು ಮುಂದಾಗಿರುವುದು ಬಿಜೆಪಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಹೊಸಕೋಟೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಎಂಟಿಬಿ ನಾಗರಾಜ್ ವಿರುದ್ಧ ¸ಪರತಹುmಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಉರಿಯುವ ಬೆಂಕಿಗೆ ತುಪ್ಪ ಸುರಿದರು ಎಂಬಂತೆ ಶರತ್ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ಸೂಚಿಸಿರುವುದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.
ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಡಾಯದ ಬಿಸಿ ಬಿಜೆಪಿಗೆ ತಾಗಿದೆ. ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.
ಹೀಗಾಗಿ ಇಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಗೆ ಕಗ್ಗಂಟಾಗಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ತಮ್ಮ ಪುತ್ರ ಹರೀಶ್ ಗೌಡಗೆ ಇಲ್ಲಿಂದ ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ.
ಈ ಕ್ಷೇತ್ರದಿಂದ ಕಣಕ್ಕಿಳಿಯಲು ಖುದ್ದು ಎಚ್.ವಿಶ್ವನಾಥ್ ಅವರ ಪುತ್ರ, ಜಿ.ಟಿ.ದೇವೇಗೌಡರ ಪುತ್ರ, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ವಿಜಯ್ಶಂಕರ್ ಆಕಾಂಕ್ಷಿಯಾಗಿದ್ದಾರೆ.
ಯಾರಿಗೆ ಟಿಕೆಟ್ ಕೊಟ್ಟರೂ ಅಸಮಾಧಾನ ಉಲ್ಭಣಿಸುವ ಬಿಸಿ ತುಪ್ಪವಗಿ ಪರಿಣಮಿಸಿದೆ. ಸಾಧ್ಯತೆ ಇರುವುದರಿಂದ ಹುಣಸೂರು ಕ್ಷೇತ್ರ ಕೂಡ ಬಿಜೆಪಿಗೆ ಕಗ್ಗಾಂಟಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲೂ ಮಾಜಿ ಶಾಸಕ ಆರ್ಶಂಕರ್ ಬಿಜೆಪಿಯಿಂದ ಸ್ಪರ್ಧಿಸುವ ಬಗ್ಗೆ ಒಲವು ತೋರಿದ್ದಾರೆ. ಆದರೆ ಈ ಕ್ಷೇತ್ರದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪುತ್ರ ಕೆ.ಇ.ಕಾಂತೇಶ್ ಸ್ಪರ್ಧಾಕಾಂಕ್ಷಿಯಾಗಿದ್ದಾರೆ.
ಹೀಗಾಗಿ ಕೊನೆ ಕ್ಷಣದವರೆಗೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ನಿಗೂಢವಾಗೇ ಉಳಿದಿದೆ.
ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲೂ ಬಂಡಾಯ ಜೋರಾಗಿದೆ. ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡಿರುವುದಕ್ಕೆ ಅಶೋಕ್ ಪೂಜಾರಿ ಸಿಡಿದೆದ್ದಿದ್ದಾರೆ.
ಒಂದು ವೇಳೆ ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡಿದರೆ ಅಶೋಕ್ ಪೂಜಾರಿ ಬಂಡಾಯವೇಳುವ ಮುನ್ಸೂಚನೆ ನೀಡಲು ಮುಂದಾಗಿರುವುದಕ್ಕೆ ಇದೇ ರೀತಿ ಕಾಗವಾಡ ಮತ್ತು ಅಥಣಿಯಲ್ಲೂ ಬಿಜೆಪಿಗೆ ಬಂಡಾಯವೇ ಮಗ್ಗಲು ಮುಳ್ಳಾಗಿದೆ.
ಕಾಗವಾಡದಿಂದ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವುದು ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೆ ಟಿಕೆಟ್ ಕೈ ತಪ್ಪಿದ್ದರಿಂದ ಕಮಲಬಿಟ್ಟು ಕೈ ತೆಕ್ಕೆಗೆ ಜಾರಿದ್ದಾರೆ.
ಅಥಣಿಯಲ್ಲೂ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿರುವುದರಿಂದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮುನಿಸಿಕೊಂಡಿದ್ದಾರೆ.
ಸದ್ಯಕ್ಕೆ ಅವರು ಯಾವುದೇ ಸದನದ ಸದಸ್ಯರಲ್ಲದ ಕಾರಣ 6 ತಿಂಗಳೊಳಗೆ ಯಾವುದಾದರೊಂದು ಸದನದ ಸದಸ್ಯರಾಗಬೇಕು. ಉಪಚುನಾವಣೆಯಲ್ಲಿ ಸವದಿ ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು.
ಇದೀಗ ಅವರ ಲೆಕ್ಕಾಚಾರ ತಲೆಕೆಳಗಾಗಿದ್ದು, ಈ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಖಾತ್ರಿಯಾಗಿದೆ.
ಹೀಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿರುವುದರಿಂದ ಅಧಿಕೃತ ಅಭ್ಯರ್ಥಿಗಳಲ್ಲಿ ನಡುಕು ಉಂಟಾಗಿದೆ.