ಜನ ಕಳಂಕಿತರನ್ನು ಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲ-ವಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು, ನ.14-ಅನರ್ಹ ಶಾಸಕರು ಅನರ್ಹತೆ ಎಂಬ ಕಳಂಕ ಹೊತ್ತುಕೊಂಡೇ ಉಪಚುನಾವಣೆ ಎದುರಿಸಬೇಕಿದೆ. ಇಂತಹವರನ್ನು ಜನ ಚುನಾವಣೆಯಲ್ಲಿ ಸೋಲಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಜವಹರ್‍ಲಾಲ್ ನೆಹರೂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮತ್ತು ಅನರ್ಹ ಶಾಸಕರು ಇಷ್ಟು ದಿನ ಬರೀ ನಾಟಕವಾಡಿದರು. ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಮಾರನೆ ದಿನವೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈಗ ಅವರು ಉಪಚುನಾವಣೆ ಎದುರಿಸುತ್ತಿದ್ದಾರೆ. ಅನರ್ಹತೆ ಎಂಬ ಕಳಂಕ ಅವರಿಗೆ ಅಂಟಿಕೊಂಡಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರು ಅನರ್ಹರಾಗಿದ್ದರು. ನ್ಯಾಯಾಂಗ ಹೋರಾಟದಲ್ಲೂ ಅದು ನಿವಾರಣೆಯಾಗಿಲ್ಲ. ಹೀಗಾಗಿ ಕಳಂಕಭರಿತರಾಗಿಯೇ ಜನರ ಮುಂದೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಜನ ಕಳಂಕಿತರನ್ನು ಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲ, ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜವಾಹರಲಾಲ್ ನೆಹರೂ ಆಧುನಿಕ ಭಾರತದ ಶಿಲ್ಪಿ. ಸ್ವಾತಂತ್ರ್ಯ ಭಾರತದಲ್ಲಿ ಪ್ರಥಮ ಪ್ರಧಾನಿಯಾಗಿ 17 ವರ್ಷಗಳ ಕಾಲ ದೇಶ ಆಳಿದರು. ಕೃಷಿ, ಕೈಗಾರಿಕೆ, ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿದ್ದರು. ಸಾಮಾಜಿಕ ಕ್ಷೇತ್ರ ಮತ್ತು ಬಂಡವಾಳ ಶಾಹಿಗಳನ್ನು ಒಗ್ಗೂಡಿಸಿ ಮಿಶ್ರ ಆರ್ಥಿಕತೆ ರೂಪಿಸಿದ್ದರು ಎಂದು ಹೇಳಿದರು.

ಮಹಾತ್ಮಗಾಂಧೀಜಿ, ಜವಾಹರಲಾಲ್‍ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಅಬ್ದುಲ್ ಕಲಾಂ ಆಜಾದ್ ಸೇರಿದಂತೆ ಮತ್ತಿತರ ಮಹನೀಯರ ತ್ಯಾಗ, ಬಲಿದಾನ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಮತ್ತು ಸಂವಿಧಾನದಿಂದಾಗಿ ಮೋದಿಯವರು ಪ್ರಧಾನಿಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದೆ. ಹಲವಾರು ಮಂದಿ ಸಚಿವರಾಗಲು ಸಂವಿಧಾನ ಕಾರಣ. ಸ್ವತಂತ್ರ ಹೋರಾಟದ ಫಲವನ್ನು ಬಿಜೆಪಿಯವರು ಸೇರಿದಂತೆ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಸಂವಿಧಾನಕ್ಕೆ ಮತ್ತು ಸ್ವಾತಂತ್ರ್ಯಹೋರಾಟಕ್ಕೆ ಅಪಚಾರವಾಗುವಂತೆ ಯಾರೂ ಮಾತನಾಡಬಾರದು. ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಮಾಡಿದಂತಹ ಮಹನೀಯರ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿಧಾನಪರಿಷತ್ ಮಾಜಿ ಸದಸ್ಯ ನಜೀರ್ ಅಹಮ್ಮದ್, ಮಾಜಿ ಸಂಸದ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ