ಬೆಂಗಳೂರು,ನ14-ರಾಜ್ಯದ ಎರಡು ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ, ಮೂರು ಪಟ್ಟಣ ಪಂಚಾಯ್ತಿ ಸೇರಿದಂತೆ 16 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಆಡಳಿತಾರೂಢ ಬಿಜೆಪಿ ದ್ವಿತೀಯ ಸ್ಥಾನದಲ್ಲಿದ್ದು, ಜೆಡಿಎಸ್ ಎಂದಿನಂತೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
418 ವಾರ್ಡ್ಗಳಲ್ಲಿ 150 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೆ, 120 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು, 62 ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳು 55 ವಾರ್ಡ್ಗಳಲ್ಲಿ ಗೆದ್ದರೆ ಇತರೆ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದ 23 ಅಭ್ಯರ್ಥಿಗಳು ವಿವಿಧ ವಾರ್ಡ್ಗಳಲ್ಲಿ ಜಯಗಳಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಕೈ ವಶವಾದರೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ದಾವಣಗೆರೆಯ 45 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ 22ರಲ್ಲಿ ಕಾಂಗ್ರೆಸ್ ಜಯಗಳಿಸಿದರೆ 17ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪಕ್ಷೇತರರು ಐದು ಕ್ಷೇತ್ರದಲ್ಲಿ ಜಯ ದಾಖಲಿಸಿದರೆ ಜೆಡಿಎಸ್ ಕೇವಲ ಒಂದು ಕ್ಷೇತ್ರದಲ್ಲಿ ಜಯ ಕಂಡಿದೆ.
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳ ಪೈಕಿ 44 ವಾರ್ಡ್ಗಳ ಭರ್ಜರಿ ಗೆಲುವ ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಲ್ಲಿ ಕಾಂಗ್ರೆಸ್ ಕೇವಲ 14 ಸ್ಥಾನಗಳನ್ನು ಗೆಲ್ಲುವಲ್ಲಿ ಸಾಧ್ಯವಾಗಿದೆ. ಪಕ್ಷೇತರರು ಎರಡು ಸ್ಥಾನಗಳಲ್ಲಿ ಜಯ ದಾಖಲಿಸಿದ್ದಾರೆ.
ಮೂರು ಪುರಸಭೆಗಳ ಪೈಕಿ ಕಂಪ್ಲಿ ಪುರಸಭೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಬೀರೂರು ಅತಂತ್ರವಾಗಿದ್ದು , ಮಾಗಡಿ ಜೆಡಿಎಸ್ ಪಾಲಾಗಿದೆ.
ಮೂರು ಪಟ್ಟಣ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಕುಂದಗೋಳ, ಜೋಗ-ಕಾರ್ಗೋಳ, ಬಿಜೆಪಿ ಪಾಲಾಗಿದೆ.ಕೂಡ್ಲಗಿಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.
19 ಸದಸ್ಯ ಬಲದ ಕುಂದಗೋಳದಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕಾಂಗ್ರೆಸ್ನ ಐವರು, ಪಕ್ಷೇತರ ಇಬ್ಬರು ಜಯ ಸಾಧಿಸಿದ್ದಾರೆ.
ಜೋಗ-ಕಾರ್ಗೋಳದ 11 ಸದಸ್ಯ ಬಲದ ಪಟ್ಟಣ ಪಂಚಾಯ್ತಿಯಲ್ಲಿ 9 ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ. ಕಾಂಗ್ರೆಸ್ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದೆ.
ಆರು ನಗರಸಭೆಗಳ ಪೈಕಿ ಕನಕಪುರದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದೆ. ಗೌರಿಬಿದನೂರಿನಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಸಾಗಿದೆ. ಕೋಲಾರ, ಮುಳಬಾಗಿಲು, ಕೆಜಿಎಫ್ನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಂತಾಮಣಿ ಜೆಡಿಎಸ್ ಪಾಲಾಗಿದೆ.