ರೋಷನ್ ಬೇಗ್‍ಗೆ ಬಿಜೆಪಿಯಿಂದ ಬಿಗ್ ಶಾಕ್

ಬೆಂಗಳೂರು, ನ.14- ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಗಡೆಗಣಿಸಲಾಗುತ್ತಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿವಾಜಿನಗರ ಕ್ಷೇತ್ರದ ಆರ್.ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಬಿಜೆಪಿ ತ್ರಿಶಂಕು ಸ್ಥಿತಿಗೆ ತಳ್ಳಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದ 17 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಪೈಕಿ ರೋಷನ್ ಬೇಗ್ ಹೊರತುಪಡಿಸಿ ಬಿಜೆಪಿ 16 ಮಂದಿಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.

ಕೊನೆ ಕ್ಷಣದಲ್ಲಿ ರೋಷನ್‍ಬೇಗ್ ಅವರನ್ನು ಸೇರಿಸಿಕೊಳ್ಳಲಾಗದೆ ಮುಖ್ಯಮಂತ್ರಿ ಬಿ.ಎಸ್.ಯಡಿಸಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನಿನ್ನೆ ತಡ ರಾತ್ರಿಯವರೆಗೂ ರೋಷನ್‍ಬೇಗ್ ನಡೆಸಿದ ಕಸರತ್ತು ವಿಫಲವಾಗಿದ್ದು, ರಾಜಕೀಯ ಅಭದ್ರತೆಯಿಂದ ನರಳುತ್ತಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಿಡಿ ಕಾರಿದ ರೋಷನ್‍ಬೇಗ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು.

ಈ ಕಾರಣಕ್ಕಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರೋಷನ್‍ಬೇಗ್ ಮತ್ತೂ ವಾಗ್ದಾಳಿ ಮುಂದುವರೆಸಿದ್ದರು.
ಸಮ್ಮಿಶ್ರ ಸರ್ಕಾರದಲ್ಲಾದ ಕ್ಷಿಪ್ರ ಬೆಣವಣಿಗೆಯಿಂದ ಹಲವಾರು ಮಂದಿ ಶಾಸಕರು ರಾಜೀನಾಮೆ ಕೊಟ್ಟಾಗ ರೋಷನ್ ಬೇಗ್ ಕೂಡ ಆಗಿನ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ಏಕಾಂಗಿಯಾಗಿ ರಾಜೀನಾಮೆ ನೀಡಿದ್ದರು. ಕೊನೆಗೆ ಅತೃಪ್ತರ ಜತೆ ಸೇರಿಕೊಂಡು ರಾಜಭವನಕ್ಕೆ ತೆರಳಿದ್ದರು.

ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಂದರ್ಭದಲ್ಲೇ ಐಎಂಎ ಹಗರಣ ಬಯಲಿಗೆ ಬಂದಿತು. ಐಎಂಎ ಮುಖ್ಯಸ್ಥ ಮನ್ಸೂರ್‍ಖಾನ್ ತಾವು ರೋಷನ್ ಬೇಗ್‍ಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ್ದರು. ಇದು ರೋಷನ್ ಬೇಗ್ ಅವರಿಗೆ ರಾಜಕೀಯ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿತ್ತು.

ಐಎಂಎ ಹಗರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದರು ಎಂಬ ಚರ್ಚೆಗಳೂ ನಡೆದವು.

ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿ ಮತ್ತೆ ಗೆದ್ದು ಬರುವ ಮಹತ್ವಾಕಾಂಕ್ಷೆ ಹೊಂದಿದ್ದ ರೋಷನ್ ಬೇಗ್‍ಗೆ ನಿನ್ನೆ ತಡರಾತ್ರಿ ಬಿಜೆಪಿ ಬಿಗ್ ಶಾಕ್ ನೀಡಿದೆ.

ಐಎಂಎ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ನೆಪ ಹೇಳಿ ಹೈಕಮಾಂಡ್ ಅವರ ಸೇರ್ಪಡೆಯನ್ನು ತಳ್ಳಿ ಹಾಕಿದೆ ಎಂದು ಹೇಳಲಾಗಿದೆ.

ನಿನ್ನೆ ರಾತ್ರಿ 16 ಮಂದಿ ಅನರ್ಹರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿತ್ತು. ಅದರಲ್ಲಿ ತಮ್ಮ ಹೆಸರು ಇಲ್ಲದೇ ಇರುವುದನ್ನು ಕಂಡು ಗಾಬರಿಯಾದ ರೋಷನ್‍ಬೇಗ್ ಅವರು ರಾತ್ರಿ 12 ಗಂಟೆಗೆ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದಾರೆ.

ಆದರೆ, ಈ ಸಂದರ್ಭದಲ್ಲಿ ಹೈಕಮಾಂಡ್ ಅನುಮತಿ ಸಿಗದೇ ಇರುವುದನ್ನು ತಿಳಿಸಲಾಗಿದ್ದು, ಉಪಚುನಾವಣೆಯಲ್ಲಿ ಶರವಣ ಎಂಬುವರಿಗೆ ಟಿಕೆಟ್ ನೀಡಲಾಗುತ್ತದೆ. ನೀವು ಮುಂದೆ ನಿಂತು ಆತನನ್ನು ಗೆಲ್ಲಿಸಿಕೊಂಡು ಬನ್ನಿ. ಚುನಾವಣೆ ಮುಗಿದ ಬಳಿಕ ನಿಮ್ಮ ಮಗನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿ, ಸಚಿವ ಸ್ಥಾನ ನೀಡುತ್ತೇವೆ. ಶಿವಾಜಿನಗರದಲ್ಲಿ ಮೂರು ಅವಧಿಯಿಂದಲೂ ಬಿಜೆಪಿ ಗೆದ್ದಿಲ್ಲ. ಈ ಬಾರಿ ನಿಮ್ಮಿಂದಾಗಿ ಗೆದ್ದರೆ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಟ್ಟು ನಿಮ್ಮ ಮಗನನ್ನು ಸಚಿವನನ್ನಾಗಿ ಮಾಡುತ್ತೇವೆ. ಐಎಂಎ ತನಿಖೆ ಪೂರ್ಣಗೊಳ್ಳುವವರೆಗೂ ನಿಮಗೆ ಯಾವ ಅಧಿಕಾರ ನೀಡಲು ಹೈಕಮಾಂಡ್ ಒಪ್ಪುತ್ತಿಲ್ಲ ಎಂದು ಯಡಿಯೂರಪ್ಪ ಅವರ ಪುತ್ರರೊಬ್ಬರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು ಗುರುವಾರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿ ಎಂದು ರೋಷನ್ ಬೇಗ್ ಅವರ ಪುತ್ರ ರುಮಾನ್ ಬೇಗ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಕರೆ ನೀಡಿದ್ದರು.

ಇನ್ನು ಬಹಳಷ್ಟು ಮಂದಿಗೆ ಪೋನ್ ಮಾಡಿ ಆಹ್ವಾನಿಸಲಾಗಿತ್ತು. ಆದರೆ, ರಾತ್ರಿ 10.30ರ ನಂತರದ ದಿಢೀರ್ ಬೆಳವಣಿಗೆ ಶಿವಾಜಿನಗರದಲ್ಲಿ ರೋಷನ್‍ಬೇಗ್ ಅವರ ಬೆಂಬಲಿಗರನ್ನು ಕಂಗೆಡಿಸಿದೆ.

ರೋಷನ್‍ಬೇಗ್ ಉನ್ನತ ನಾಯಕರು. ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಬಿಜೆಪಿ ಸಿದ್ಧಾಂತಕ್ಕೆ ಅವರು ಹೊಂದಿಕೊಳ್ಳಬೇಕು. ಅನರ್ಹರ ಜತೆ ರಾಜಭವನಕ್ಕೆ ಬಂದಾಗ ರೋಷನ್ ಬೇಗ್ ಇಸ್ಲಾಂ ಟೋಪಿ ಹಾಕಿಕೊಂಡು ಬಂದಿದ್ದರು. ಆ ಸಂದರ್ಭದಲ್ಲೇ ಬಿಜೆಪಿಗೆ ಮುಜುಗರವಾಗಿತ್ತು. ಬಿಜೆಪಿಯ ರಾಷ್ಟ್ರೀಯ ನಾಯಕರಾದ ಮುಫ್ತಿಯಾರ್ ಅಬ್ಬಾಸ್ ನಕ್ವಿ ಹಾಗೂ ಇತರರಂತೆ ಪಕ್ಷಕ್ಕೆ ಹತ್ತಿರವಾದ ಸಿದ್ದಾಂತವನ್ನು ಅಳವಡಿಸಿಕೊಂಡರೆ ರೋಷನ್ ಬೇಗ್ ಅವರನ್ನು ಮುಂದಿನ ದಿನಗಳಲ್ಲಿ ಪರಿಗಣಿಸಬಹುದು ಎಂದು ಬಿಜೆಪಿಯ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದಾಗ್ಯೂ ಇಂದು ಬೆಳಗ್ಗೆ ರೋಷನ್ ಬೇಗ್ ಬಿಜೆಪಿ ಕಚೇರಿಗೆ ಹೋಗಲು ಮುಂದಾಗಿದ್ದರು. ಒಂದು ವೇಳೆ ಅವರು ಸ್ವಯಂ ಪ್ರೇರಿತವಾಗಿ ಬಿಜೆಪಿ ಕಚೇರಿಗೆ ಬಂದು ಅವರಿಗೆ ವೇದಿಕೆಯಲ್ಲಿ ಸ್ಥಾನ ಸಿಗದೇ ಹೋದರೆ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ದಯವಿಟ್ಟು ಬರುವುದು ಬೇಡ ಎಂದು ಕೆಲವು ಬಿಜೆಪಿ ನಾಯಕರು ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಎಂಟು ಬಾರಿ ಶಾಸಕರಾಗಿರುವ ರೋಷನ್ ಬೇಗ್ ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿಯಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಹಿರಿಯ ನಾಯಕರನ್ನು ಟೀಕಿಸಿ ತಮ್ಮ ಅಸ್ಥಿತ್ವವನ್ನು ಸಾಬೀತುಪಡಿಸಿಕೊಳ್ಳಲು ಯತ್ನಿಸುವ ಪ್ರಯತ್ನದಲ್ಲಿ ದುಡುಕಿ ರಾಜೀನಾಮೆ ಕೊಟ್ಟು ಈಗ ಅತ್ತ ಶಾಸಕ ಸ್ಥಾನವೂ ಇಲ್ಲ. ಇತ್ತ ಬಿಜೆಪಿಯಲ್ಲೂ ಅವಕಾಶ ಇಲ್ಲ ಎಂಬಂತಹ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ