ಬೆಂಗಳೂರು, ನ.14- ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆ ಉಪ ಚುನಾವಣೆಯಲ್ಲಿ ಗೆಲ್ಲಿಸಿ ಸಚಿವರನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ನೂತನವಾಗಿ ಸೇರ್ಪಡೆಯಾದ ಮಾಜಿ ಶಾಸಕರಿಗೆ ಭರವಸೆ ಕೊಟ್ಟರು.
ಚುನಾವಣೆಗೂ ಮುನ್ನ ನಿಮಗೆ ಯಾವ ಭರವಸೆ ಕೊಡಲಾಗಿತೋ ಅದೇ ರೀತಿ ಅದನ್ನು ಈಡೇರಿಸುವುದು ನಮ್ಮ ಕರ್ತವ್ಯ. ಉಪಚುನಾವಣೆಯಲ್ಲಿ ನಿಮ್ಮ ಗೆಲುವಿಗಾಗಿ ನಮ್ಮ ಕಾರ್ಯಕರ್ತರು ಶ್ರಮಿಸುತ್ತಾರೆ. ಗೆದ್ದು ನೀವು ಸಚಿವರಾಗುವುದು ನೂರಕ್ಕೆ ನೂರರಷ್ಟು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಧೈರ್ಯ ತುಂಬಿದರು.
ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್-ಜೆಡಿಎಸ್ನ ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಯಡಿಯೂರಪ್ಪ, ನಿಮಗೆ ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಪಾಲನೆ ಮಾಡುತ್ತೇನೆ. ದ್ರೋಹ ಮಾಡುವುದಿಲ್ಲ. ನಮ್ಮ ಮುಖಂಡರು ಕೂಡ ಒಡಕಿನ ಮಾತನಾಡದೆ ನಿಮ್ಮನ್ನು ಗೆಲ್ಲಿಸಿಕೊಡಲಿದ್ದಾರೆ. ಇದು ನಮ್ಮ ಗುರಿ. ಇದರಲ್ಲಿ ಎಳ್ಳಷ್ಟು ಸಂಶಯ ಬೇಡ ಎಂದು ಅಭಯ ನೀಡಿದರು.
ರಾಜ್ಯ ಘಟಕ ಸೇರಿದಂತೆ ಕೇಂದ್ರ ನಾಯಕತ್ವ ನಿಮ್ಮ ಬೆಂಬಲಿಕ್ಕಿದೆ. ನೀವು ಸಣ್ಣಪುಟ್ಟ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಉಪಚುನಾವಣೆಯಲ್ಲಿ ಗೆದ್ದ ಬಳಿಕ ಬೃಹತ್ ಸಮಾವೇಶ ನಡೆಸಿ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳೊಣ. ಇದಕ್ಕಾಗಿ ಕಾರ್ಯಕರ್ತರು ಸಜ್ಜಾಗಬೇಕೆಂದು ಸೂಚಿಸಿದರು.
ಉಪ ಚುನಾವಣೆಯಲ್ಲಿ ಕಾರ್ಯಕರ್ತರು, ಪಕ್ಷದ ಮುಖಂಡರು, ತನುಮನ, ಧನದಿಂದ ಕೆಲಸ ಮಾಡಬೇಕು. ಇವರ ರಾಜೀನಾಮೆಯಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ನಮ್ಮ ಗೆಲುವು ದೊಡ್ಡದೇ ಅಲ್ಲ. ಉಪ ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ಕುತೂಹಲವಿಲ್ಲ ಎಂದು ಬಿಎಸ್ವೈ ಹೇಳಿದರು.
ನಾಳೆಯಿಂದಲೇ 25 ಮಂದಿ ಸಂಸದರು, ಶಾಸಕರು, ಕೇಂದ್ರ ಸಚಿವರು, ಪದಾಧಿಕಾರಿಗಳು ಸೇರಿದಂತೆ ಎಲ್ಲರೂ ಇವರ ಗೆಲುವಿಗೆ ಶ್ರಮಿಸಬೇಕು. ನಿಮಗೆ ನಿಗದಿ ಪಡಿಸಿದ ಕ್ಷೇತ್ರಗಳಲ್ಲಿ ಪಕ್ಷ ಏನು ಸೂಚಿಸುತ್ತದೆಯೋ ಅದನ್ನು ಮಾಡಬೇಕೆಂದು ಕರೆ ಕೊಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಮಾತನಾಡಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಸಿಡಿದು ಬಿದ್ದಿದ್ದಾರೆ. ಇದು ಚುನಾವಣೆಗೂ ಮುನ್ನ ನಮ್ಮ ಗೆಲುವಿನ ಮುನ್ಸೂಚನೆ ಎಂದು ಭವಿಷ್ಯ ನುಡಿದರು.
ಹದಿನೈದು ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಯಾವುದೇ ಸಂಶಯ ಇಟ್ಟುಕೊಳ್ಳಬೇಡಿ. ಪಕ್ಷಕ್ಕೆ ಸೇರ್ಪಡೆಯಾಗಿರುವವರನ್ನು ಕಾಯ,ವಾಚ ಮನಸ್ಸಿನಿಂದ ಸ್ವೀಕರಿಸಿದ್ದೇನೆ. ನಿಮ್ಮ ಗೆಲುವಿಗೆ ನಮ್ಮ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಅಭಯ ನೀಡಿದರು.
ಕಾಂಗ್ರೆಸ್ನಲ್ಲಿ ಬಣಗಳು ಸೃಷ್ಟಿಯಾಗಿ ಒಬ್ಬರು ಮತ್ತೊಬ್ಬರನ್ನು ರಾಜಕೀಯವಾಗಿ ಮುಗಿಸುವುದಕ್ಕಾಗಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನಾವು ಗೆಲ್ಲುವ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.
ರಾಜ್ಯದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಕೆಟ್ಟ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್-ಜೆಡಿಎಸ್ನ ನಾಯಕರ ನಡವಳಿಕೆಯಿಂದ ಬೇಸತ್ತು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಇನ್ನಷ್ಟು ವಿಸ್ತರಣೆ ಮಾಡಲು ನಮಗೆ ಆನೆ ಬಲ ಬಂದಿದೆ ಎಂದು ಹೇಳಿದರು.
ಹದಿನಾಲ್ಕು ತಿಂಗಳು ಆಡಳಿತದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ನದ್ದು ಅಪವಿತ್ರ ಮೈತ್ರಿ. ಅಲ್ಲಿನ ದುರಾಡಳಿತವನ್ನು ಕಿತ್ತೊಗೆಯಬೇಕೆಂಬ ಕಾರಣಕ್ಕಾಗಿ 17 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಲಿದ್ದೇವೆ ಎಂದು ಭರವಸೆಕೊಟ್ಟರು.
ದೇಶದಲ್ಲೇ ಇಂದು ರಾಜಕೀಯ ದೃವೀಕರಣ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಬೇರೆ ಬೇರೆ ಪಕ್ಷಗಳ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರು ಪಕ್ಷಕ್ಕೆ ಬರಲಿದ್ದಾರೆ ಎಂದು ಮುನ್ಸೂಚನೆ ಕೊಟ್ಟರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದಕಾರಜೋಳ. ಡಾ.ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಈಶ್ವರಪ್ಪ, ಸೋಮಣ್ಣ, ಬಸವರಾಜಬೊಮ್ಮಾಯಿ, ಶಾಸಕರು, ಮುಖಂಡರು ಉಪಸ್ಥಿತರಿದ್ದರು.