ಉಗ್ರರ ದಾಳಿ ಭೀತಿ, ಶಬರಿಮಲೆಯಲ್ಲಿ ಕಟ್ಟೆಚ್ಚರ ವಹಿಸಲು ಗುಪ್ತಚರ ಇಲಾಖೆ ಸೂಚನೆ

ಕಾಸರಗೋಡು: ಕೇರಳದ ವಯನಾಡ್‌ನಲ್ಲಿಇತ್ತೀಚೆಗೆ ನಡೆದ ಮಾವೋವಾದಿಗಳ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಮಾವೋವಾದಿಗಳ ಸಹಿತ ಭಯೋತ್ಪಾದಕ ಸಂಘಟನೆಗಳಿಂದ ದಾಳಿ ಸಾಧ್ಯತೆ ಇರುವುದರಿಂದ ಶಬರಿಮಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್‌ ಇಲಾಖೆಗೆ ಗುಪ್ತಚರ ಇಲಾಖೆ ನಿರ್ದೇಶನ ನೀಡಿದೆ.

ನ.16ರಿಂದ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದು ಜ.20ರ ತನಕ ಮಂಡಲ, ಮಕರ ಮಹೋತ್ಸವ ನಡೆಯಲಿದೆ. ಶಬರಿಮಲೆ ಕ್ಷೇತ್ರವು ಅರಣ್ಯದೊಳಗಿರುವುದರಿಂದ ದರ್ಶನಕ್ಕಾಗಿ ಭಕ್ತರು ಅರಣ್ಯ ಮಧ್ಯೆಯಲ್ಲಿಯೇ ಸಂಚಾರ ನಡೆಸುತ್ತಾರೆ. ಭಕ್ತಾದಿಗಳ ಮಧ್ಯೆ ಭಯೋತ್ಪಾದಕರು ನುಸುಳುವ ಸಾಧ್ಯತೆಯಿರುವುದರಿಂದ ಈ ವರ್ಷದ ಶಬರಿಮಲೆ ಮಂಡಲ ಹಾಗೂ ಮಕರ ಮಹೋತ್ಸವ ಸಂದರ್ಭದಲ್ಲಿಅತೀವ ಭದ್ರತೆಯನ್ನು ಮಾಡುವಂತೆ ಗುಪ್ತಚರ ವರದಿ ಸೂಚಿಸಿದೆ.

ಇತ್ತೀಚೆಗೆ ವಯನಾಡು ಜಿಲ್ಲೆಯಲ್ಲಿ ಮಾವೋವಾದಿಗಳ ಹತ್ಯೆ, ಕಲ್ಲಿಕೋಟೆ ಜಿಲ್ಲೆಯಲ್ಲಿಈ ಸಂಘಟನೆಗೆ ಸೇರಿದ ಇಬ್ಬರನ್ನು ಬಂಧಿಸಿದ ಹಿನ್ನೆಲೆಯಲ್ಲಿಭಾರಿ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ. ಅಲ್ಲದೆ ಹೊರರಾಜ್ಯಗಳ ಪೊಲೀಸರ ಸಹಾಯವನ್ನು ಪಡೆಯಲಾಗುವುದು. ಈಗಾಗಲೇ ಕೇಂದ್ರ ತನಿಖಾ ತಂಡಗಳು ನಿಗಾವಹಿಸಿವೆ. ಕರಾವಳಿ ತೀರ ಪ್ರದೇಶಗಳ ಮೂಲಕ ಆಯುಧಗಳು, ಸ್ಫೋಟಕ ವಸ್ತುಗಳನ್ನು ಕೇರಳಕ್ಕೆ ತಲುಪಿಸುವ ಸಾಧ್ಯತೆಯಿರುವುದರಿಂದ ತೀರ ಪ್ರದೇಶಗಳಲ್ಲಿಕಟ್ಟೆಚ್ಚರ ನೀಡಲಾಗಿದೆ.

ಈ ಹಿನ್ನೆ್ನಲೆಯಲ್ಲಿ ಶಬರಿಮಲೆ ಸನ್ನಿಧಾನಕ್ಕೆ ಸಾಮಗ್ರಿಗಳನ್ನು ಹೇರಿಕೊಂಡು ಬರುವ ಟ್ರ್ಯಾಕ್ಟರ್‌ಗಳು, ಡೋಲಿಗಳಲ್ಲಿ ಬರುವವರನ್ನು ತಪಾಸಣೆಗೊಳಪಡಿಸಲಾಗುವುದು. ಶಬರಿಮಲೆಗೆ ಆಗಮಿಸುವ ವಿದೇಶಿ ಭಕ್ತರ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಅಲ್ಲದೆ ಎಲ್ಲಾಭಾಗದಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸುವುದು. ಅಲ್ಲದೆ ಶಬರಿಮಲೆ ಸುತ್ತಮುತ್ತಲಲ್ಲಿ ವಾಯುಸೇನೆ ಹಾಗೂ ನೌಕಾ ಪಡೆ ಜಂಟಿಯಾಗಿ ನಿಗಾ ವಹಿಸಲಿದೆ.
ಶಬರಿಮಲೆಯ ಮಂಡಲ ಮಹೋತ್ಸವಕ್ಕಾಗಿ ನ.16 ರಿಂದ ಶಬರಿಮಲೆ ಬಾಗಿಲು ತೆರೆಯುವುದು. ನ.27ಕ್ಕೆ ಮಂಡಲ ಪೂಜೆ ನಡೆಯಲಿದೆ. ಮಂಡಲ ಪೂಜೆ ಬಳಿಕ ಡಿ.27ಕ್ಕೆ ಬಾಗಿಲು ಮುಚ್ಚುವುದು. ಮಕರ ಮಹೋತ್ಸವಕ್ಕಾಗಿ ಡಿ.30ರಂದು ಮತ್ತೆ ಬಾಗಿಲು ತೆರೆಯುವುದು. ಜ.11ರಂದು ಚಂದನ ಕೂಟ್ಟಂ ಉತ್ಸವ, ಜ.12ರಂದು ಪೇಟತುಳ್ಳಲ್‌, ಜ.15ರಂದು ಈ ಬಾರಿ ಮಕರ ಜ್ಯೋತಿ ನಡೆಯುವುದು. ಜ.20ಕ್ಕೆ ಕ್ಷೇತ್ರದ ಬಾಗಿಲು ಮುಚ್ಚುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ