ಅನರ್ಹ ಶಾಸಕರ ಪ್ರಕರಣ-ನಾಳೆ ಅಂತಿಮ ತೀರ್ಪು ಪ್ರಕಟಿಸಲಿರುವ ಸುಪ್ರೀಂಕೋರ್ಟ್

ಬೆಂಗಳೂರು,ನ.12-ಆಡಳಿತ ಮತ್ತು ಪ್ರತಿಪಕ್ಷಗಳು ಹಾಗೂ ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ 17 ಮಂದಿ ಅನರ್ಹತೆ ಪ್ರಕರಣ ಸಂಬಂಧ ನಾಳೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ.

ನಾಳೆ ಬೆಳಗ್ಗೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಎಂ.ವಿ.ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜಯ್ ಖನ್ನ, ಕೃಷ್ಣಮುರುಳಿ ಅವರ ತ್ರಿಸದಸ್ಯ ಪೀಠ ನೀಡಲಿರುವ ತೀರ್ಪು ಸ್ಪೀಕರ್ ಸ್ಥಾನ ಕುರಿಂತೆ ಹೊಸ ವ್ಯಾಖ್ಯಾನ ಬರೆಯುವ ಸಾಧ್ಯತೆ ಇದೆ.

ಕರ್ನಾಟಕದ ಹಿಂದಿನ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು ಕಾಂಗ್ರೆಸ್‍ನ 13, ಜೆಡಿಎಸ್ 3 ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರ ಜೊತೆಗೆ ಈ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅವರು ಯಾವುದೇ ರೀತಿಯ ಸಾಂವಿಧಾನಿಕ ಸ್ಥಾನ ಅಲಂಕರಿಸುವಂತಿಲ್ಲ ಎಂದು ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಎರಡೂ ಕಡೆಯ ವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್ ನಾಳೆ ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ಪ್ರಕಟಿಸಲಿದೆ.

ತೀರ್ಪಿಗೆ ಕ್ಷಣಗಣನೆ ಆರಂಭವಾಗಿರುವಂತೆ ಅನರ್ಹರಲ್ಲಿ ಆತಂಕ ಹೆಚ್ಚಾಗಿದೆ. ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಲಿದೆಯೋ? ಇಲ್ಲವೇ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಲಿದೆಯೋ ? ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಿದೆಯೋ? ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

ನ್ಯಾಯಾಲಯ ನಾಳೆ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ದೆಹಲಿಯತ್ತ ದೌಡಾಯಿಸಿದ್ದಾರೆ. ಅನರ್ಹರ ಪರವಾಗಿ ಸುಪ್ರೀಂಕೋರ್ಟ್‍ನಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ, ಸುಂದರಂ ಸೇರಿದಂತೆ ಘಟಾನುಘಟಿಗಳೇ ವಾದ ಮಾಡಿದ್ದರು.

ಕಾಂಗ್ರೆಸ್ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಾಲ್, ಜೆಡಿಎಸ್ ಪರವಾಗಿ ರಾಜು ಧವನ್, ಸ್ಪೀಕರ್ ಪರವಾಗಿ ಮೆಹ್ತಾ ವಾದ ಮಂಡಿಸಿದ್ದರು.
ಹಲವು ದಿನಗಳವರೆಗೆ ವಾದ-ವಿವಾದವನ್ನು ಸುದೀರ್ಘವಾಗಿ ಆಲಿಸಿರುವ ತ್ರಿಸದಸ್ಯ ಪೀಠ ನಾಳೆ ಏನೇ ತೀರ್ಪು ನೀಡಿದರೂ ಅದು ದೇಶದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗಲಿದೆ.

ಈವರೆಗೂ ಸ್ಪೀಕರ್ ಆದೇಶಿಸಿದ ತೀರ್ಪನ್ನು ದೇಶದ ಯಾವುದೇ ನ್ಯಾಯಾಲಯ ಪ್ರಶ್ನೆ ಮಾಡಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದಾಗ ಅಂದಿನ ಸ್ಪೀಕರ್ ಕೆ.ಜಿ.ಬೋಪಯ್ಯ ಶಾಸಕರನ್ನ ಅನರ್ಹಗೊಳಿಸಿದಾಗ ಸಹಜ ನ್ಯಾಯ ಪರಿಪಾಲನೆ ಮಾಡಿಲ್ಲ ಎಂಬ ಒಂದೇ ಕಾರಣಕ್ಕಾಗಿ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ಅದನ್ನು ಹೊರತುಪಡಿಸಿದರೆ ಈವರೆಗೂ ಸ್ಪೀಕರ್ ತೆಗೆದುಕೊಂಡ ಯಾವುದೇ ತೀರ್ಮಾನವನ್ನು ದೇಶದ ಕೆಳಹಂತದ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‍ವರೆಗೂ ಮಧ್ಯಪ್ರವೇಶ ಮಾಡಿರುವ ನಿದರ್ಶನಗಳು ಇಲ್ಲ.

ಹೀಗಾಗಿ ನಾಳೆ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಸ್ಪೀಕರ್ ಸ್ಥಾನಮಾನದ ಬಗ್ಗೆ ಹೊಸ ವ್ಯಾಖ್ಯಾನ ಬರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಸ್ಪೀಕರ್ ತೆಗೆದುಕೊಂಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ಅನರ್ಹರ ಸ್ಥಿತಿ ಇನ್ನಷ್ಟು ಡೋಲಾಯಮಾನವಾಗಲಿದೆ. ಏಕೆಂದರೆ 2023ರ ಮೇ ತಿಂಗಳವರೆಗೆ ಅವರು ಯಾವುದೇ ಚುನಾವಣೆಗೂ ಸ್ಪರ್ಧಿಸುವಂತಿಲ್ಲ.

ಕೇವಲ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದು ಉಪಚುನಾವಣೆಗೆ ಸ್ಪರ್ಧಿಸಬಹುದೆಂದು ತೀರ್ಪು ನೀಡಿದರೆ ಅನರ್ಹರಿಗೆ ಎದುರಾಗಿದ್ದ ಬಹುದೊಡ್ಡ ಕಂಕಟಕ ನಿವಾರಣೆಯಾಗಲಿದೆ.

ಯಾವುದೇ ತೀರ್ಪು ನೀಡದೆ ಪುನಃ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಮತ್ತೊಮ್ಮೆ ಪರಿಶೀಲನೆ ಮಾಡಲಿ ಎಂದು ವಾಪಸ್ ಕಳುಹಿಸಿದರೆ ಉಪಚುನಾವಣೆ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ.

ಏಕೆಂದರೆ ಈಗಾಗಲೇ ಸ್ಪೀಕರ್ ಪರ ವಾದ ಮಂಡಿಸಿದ್ದ ವಕೀಲರು ನ್ಯಾಯಾಲಯ ಪುನಃ ರಾಜೀನಾಮೆ ಪ್ರಕರಣವನ್ನು ಸ್ಪೀಕರ್ ಮರುಪರಿಶೀಲನೆಗೆ ಕಳುಹಿಸಿದರೆ ಅದನ್ನು ಪರಾಮರ್ಶೆಗೊಳಪಡಿಸಲು ಸಿದ್ದರಿದ್ದರು ಎಂಬ ಮಾಹಿತಿ ನೀಡಿದ್ದರು.

ಮುಖ್ಯವಾಗಿ ಮೊದಲು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕೋ ಇಲ್ಲವೇ ಕಾಂಗ್ರೆಸ್-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ದೂರಿನನ್ವಯ ಅನರ್ಹತೆಯನ್ನು ಪರಿಗಣಿಸಬೇಕೇ ಎಂಬುದುನ್ನು ನ್ಯಾಯಾಲಯ ಇತ್ಯರ್ಥಪಡಿಸಲಿದೆ.

ಒಟ್ಟಿನಲ್ಲಿ ನಾಳೆ ಅನರ್ಹರ ಕುರಿತು ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಅದೊಂದು ಐತಿಹಾಸಿಕವಾಗುವುದರಲ್ಲಿ ಅನುಮಾನವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ