ವರಿಷ್ಠರ ತೀರ್ಮಾನವೇ ಅಂತಿಮ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ನ.12-ಉಪಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಕುರಿತು ತಲೆಗೊಬ್ಬಬ್ಬರಂತೆ ಮಾತನಾಡಬಾರದೆಂದು ಸಚಿವರು ಹಾಗೂ ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ನಾಳೆ ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರ ತೀರ್ಪು ಹೊರಬೀಳಲಿದೆ. ನ್ಯಾಯಾಲಯ ತೀರ್ಪು ಬಂದ ಬಳಿಕವಷ್ಟೇ ಟಿಕೆಟ್ ನೀಡುವ ಕುರಿತಂತೆ ತೀರ್ಮಾನವಾಗಲಿದೆ. ಅಲ್ಲಿಯವರೆಗೂ ಯಾರೊಬ್ಬರೂ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಯಾರಿಗೆ , ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬುದರ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ. ಅನರ್ಹರಿಗೆ ಟಿಕೆಟ್ ನೀಡುವ ಕುರಿತಂತೆ ಸ್ಥಳೀಯ ಮುಖಂಡರು ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಬಿಎಸ್‍ವೈ ಸೂಚನೆ ಕೊಟ್ಟಿದ್ದಾರೆ.

ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಟ್ಟರೆ ಅನರ್ಹರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಅಲ್ಲದೆ ಅವರು ರಾಜೀನಾಮೆ ನೀಡಿದ್ದರಿಂದಲೇ ಸರ್ಕಾರ ರಚನೆಯಾಗಿದೆ. ಅವರ ತ್ಯಾಗವನ್ನು ನಾವು ಮರೆಯಬಾರದೆಂದು ಕಿವಿಮಾತು ಹೇಳಿದ್ದಾರೆ.

ಟಿಕೆಟ್ ನೀಡುವ ಕುರಿತು ನಾನು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ರಾಷ್ಟ್ರೀಯ ಸಂಘಟನಾ ಸಹಕಾರ್ಯರ್ದರ್ಶಿ ಬಿ.ಎಲ್.ಸಂತೋಷ್, ಪಕ್ಷದ ಕೇಂದ್ರ ಚುನಾವಣೆ ಸಮಿತಿಗೆ ಶಿಫಾರಸ್ಸು ಮಾಡುತ್ತೇವೆ.

ಅಂತಿಮವಾಗಿ ಚುನಾವಣೆ ಸಮಿತಿ ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ತೀರ್ಮಾನ ಮಾಡುತ್ತದೆ. ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಲಿದೆ. ಅಲ್ಲಿಯವರೆಗೆ ಎಲ್ಲರೂ ಬಾಯಿಗೆ ಬೀಗ ಹಾಕಬೇಕೆಂದು ಸೂಚಿಸಿದ್ದಾರೆ.

ಅನರ್ಹರಿಗೆ ಟಿಕೆಟ್ ನೀಡುವ ಸಂಬಂಧ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ. ಕೆಲವರಿಗೆ ಟಿಕೆಟ್ ನೀಡಲು ಒಲವು ವ್ಯಕ್ತವಾಗಿದ್ದರೆ ಇನ್ನು ಕೆಲವರಿಗೆ ವಿರೋಧ ವ್ಯಕ್ತವಾಗಿದೆ.

ಇದು ಯಡಿಯೂರಪ್ಪ ಮತ್ತು ಬಿಜೆಪಿ ನಡುವೆ ಗೊಂದಲ ಸೃಷ್ಟಿಸಲು ಕಾರಣವಾಗಿತ್ತು. ಹೀಗಾಗಿಯೇ ಎಲ್ಲರೂ ಮೌನಕ್ಕೆ ಶರಣಾಗಬೇಕೆಂದು ತಾಕೀತು ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ