ಬೆಂಗಳೂರು,ನ.8- ಮುಂದಿನ ವಾರ ವಿವಾದಾತ್ಮಕ ಅಯೋಧ್ಯೆ ತೀರ್ಪು ಸುಪ್ರೀಂಕೋರ್ಟ್ ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೋಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಪೋಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರು, ವಲಯ ಐಜಿಪಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಬೆಂಗಳೂರು ನಗರ ಪೋಲೀಸ್ ಆಯುಕ್ತರು ಸೇರಿದಂತೆ ಮತ್ತಿತರ ಹಿರಿಯ ಪೋಲೀಸ್ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿ ಯಾವುದೇ ತರದ ಅಹಿತಕರ ಘಟನೆ ನಡೆಯಬಾರದೆಂದು ತಾಕೀತು ಮಾಡಿದ್ದಾರೆ.
ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಅತಿಸೂಕ್ಷ್ಮ ಪ್ರದೇಶಗಳಾದ ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ದವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಬಿಗಿಭದ್ರತೆಯನ್ನು ಕೈಗೊಳ್ಳಲು ಸಿಎಂ ನಿರ್ದೇಶಿಸಿದ್ದಾರೆ.
ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಮಾಲ್ಗಳು, ಪ್ರತಿಷ್ಠಿತ ಐಟಿಬಿಟಿ ಕಂಪನಿಗಳು, ವಿಧಾನಸೌಧ, ವಿಕಾಸಸೌಧ, ರಾಜಭವನ, ಹೈಕೋರ್ಟ್, ಮಾರುಕಟ್ಟೆಗಳು, ಜನನಿಬಿಡ ಪ್ರದೇಶಗಳು ಹದ್ದಿನ ಕಣ್ಣಿಡಲಾಗಿದೆ.
ಕೆಲವು ಸಮಾಜಘಾತುಕ ಶಕ್ತಿಗಳು ಸಮುದ್ರದ ಮೂಲಕ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬಂದರಿನಲ್ಲೂ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಅಲ್ಲದೆ ರಾಜ್ಯಕ್ಕೆ ಹೊಂದಿಕೊಂಡಿರುವ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಾಂಗಣ, ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು, ಚೆಕ್ಪೋಸ್ಟ್ಗಳಲ್ಲಿ ಹೊರಹೋಗುವ ಮತ್ತು ಒಳಬರುವ ವಾಹನಗಳನ್ನು ಬಿಗಿ ತಪಾಸಣೆ ನಡೆಸಿದೆ.
ಇತ್ತೀಚೆಗೆ ಕೇಂದ್ರ ಗುಪ್ತಚರ ವಿಭಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಕರ್ನಾಟಕದಲ್ಲಿ ಬಾಂಗ್ಲಾ ಮೂಲದ ಜಮಾತೆ-ಉದ್ ಸಂಘಟನೆಯ ಉಗ್ರಗಾಮಿಗಳು ಹಾಗೂ ಐಸಿಸ್ನ ಆತ್ಮಾಹುತಿ ದಳದ ಸದಸ್ಯರು ಬೀಡು ಬಿಟ್ಟಿದ್ದಾರೆಂಬ ಆತಂಕಕಾರಿ ಸುದ್ದಿಯನ್ನು ಹೊರ ಹಾಕಿದ್ದರು.
ಇದೀಗ ಅಯೋಧ್ಯೆ ತೀರ್ಪು ಮುಂದಿನ ವಾರ ಸುಪ್ರೀಂಕೋರ್ಟ್ ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುವುದರಿಂದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಅಧಿಕಾರಿಗಳ ಜೊತೆ ಖುದ್ದು ಸಭೆ ನಡೆಸಿ ಶಾಂತಿಪ್ರಿಯ ಕರ್ನಾಟಕದಲ್ಲಿ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಬಿಗಿಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಹಿಂದೆ ಬಾಬ್ರಿ ಮಸೀದಿ ಧ್ವಂಸವಾದ ವೇಳೆ ರಾಜ್ಯದಲ್ಲೂ ಅಹಿತಕರ ಘಟನೆಗಳು ಜರುಗಿದ್ದವು. ಹೀಗಾಗಿ ರಾಜ್ಯ ಸರ್ಕಾರ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸರ್ಪಗಾವಲು ಹಾಕಿದೆ.
ಅಗತ್ಯವಿದ್ದರೆ ಕೇಂದ್ರದಿಂದ ಪ್ಯಾರಾ ಮಿಲಿಟರಿಯನ್ನು ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಹಿಂದೆ ಕೋಮುಗಲಭೆ ನಡೆದ ಕಡೆಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಪೋಲೀಸರು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ.