ನಮ್ಮ ಪರವಾಗಿಯೇ ತೀರ್ಪು ಬರುವ ಸಾಧ್ಯತೆಯಿದೆ–ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು, ನ.8-ಸುಪ್ರೀಂಕೋರ್ಟ್‍ನಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವ ಸಾಧ್ಯತೆ ಇದೆ  ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುತ್ತಿದ್ದು, ನೀತಿ ಸಂಹಿತೆ ಕೂಡ ಜಾರಿಯಾಗಲಿದೆ. ನಮ್ಮನ್ನು ಅನರ್ಹಗೊಳಿಸಿರುವ ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪುನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ  ಮೇಲ್ಮನವಿ ಸಲ್ಲಿಸಿದ್ದೇವೆ. ಅದರ ವಾದ-ವಿವಾದ ಮುಕ್ತಾಯಗೊಂಡಿದೆ. ಇನ್ನೇನು ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದರು.

ಈ ನಡುವೆ ಉಪಚುನಾವಣೆ  ಎದುರಾಗಿದೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್‍ಗೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದ್ದು, ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವ  ಉಪಚುನಾವಣೆಯನ್ನು ರದ್ದು ಮಾಡಿ ಅಥವಾ ಅನರ್ಹತೆ ಪ್ರಕರಣ ಕುರಿತಂತೆ ತೀರ್ಪು ನೀಡಿ ಎಂದು ಮನವಿ ಮಾಡಿದ್ದೇವೆ. ಬುಧವಾರ ನಮ್ಮ ಮೇಲ್ಮನವಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ  ಅನರ್ಹ ಶಾಸಕರ ಪರ ವಕೀಲರು, ನಮ್ಮ ಮೊದಲ ಆದ್ಯತೆ ಸುಪ್ರೀಂಕೋರ್ಟ್ ಈಗಾಗಲೇ ವಿಚಾರಣೆ ಪೂರ್ಣಗೊಳಿಸಿರುವುದರಿಂದ ತೀರ್ಪು ನೀಡಬೇಕು. ರಜಾ ಕಾಲದಲ್ಲೇ ಅನರ್ಹತೆ ಪ್ರಕರಣದ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಧೀಶರು ಭರವಸೆ ನೀಡಿದ್ದರು. ತಾಂತ್ರಿಕಕಾರಣದಿಂದಾಗಿ ವಿಳಂಬವಾಗಿದೆ. ತೀರ್ಪಿನ ಬಗ್ಗೆ ನ್ಯಾಯಾಧೀಶರ ಗಮನ ಸೆಳೆಯಲು ಇಂದು ಮೇಲ್ಮನವಿ ಸಲ್ಲಿಸಿದೆವು ಎಂದು ಸೋಮಶೇಖರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ