ಬೆಂಗಳೂರು, ನ.7- ಕನ್ನಡವನ್ನು ಬಳಸುವ ಮೂಲಕ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು.ಅಲ್ಲದೆ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು ಎಂದು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಬಿ.ಎಚ್.ಜಯದೇವ್ ತಿಳಿಸಿದರು.
ಕರ್ನಾಟಕ ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಿದ ಕನ್ನಡದ ಮಹನೀಯರನ್ನು ಸ್ಮರಿಸಿಕೊಳ್ಳುವ ಸುದಿನವೇ ಈ ರಾಜ್ಯೋತ್ಸವ ಎಂದರು.
ಐದು ಪ್ರಾಂತ್ಯಗಳಾಗಿ ವಿಭಜನೆಯಾಗಿದ್ದ ಕನ್ನಡ ನಾಡನ್ನು ಒಂದು ಮಾಡಿದ ಏಕೀಕರಣದ ಕತೆ ಬಲು ರೋಚಕವಾದುದು. ಈ ಕತೆಯನ್ನು ಎಲ್ಲ ಕನ್ನಡಿಗರು ಕೇಳಿ ಕನ್ನಡದ ಐಸಿರಿಯನ್ನು ಇಂದಿನ ಜನಾಂಗಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.
ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ದಾಸರಹಳ್ಳಿ ಬಿಬಿಎಂಪಿ ಸದಸ್ಯೆ ಉಮಾದೇವಿ ನಾಗರಾಜು, ಕನ್ನಡ ಬಳಸುವುದರ ಮೂಲಕ ಕನ್ನಡವನ್ನು ಬೆಳೆಸಬೇಕಿದೆ.ನಾಡಿನಲ್ಲಿ ವಾಸಿಸುವ ಜನರೆಲ್ಲರೂ ನೆಲ, ಜಲ, ಭಾಷೆ, ಸಂಸ್ಕøತಿಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ.ಕನ್ನಡ ಸಂಘಟನೆಗಳು ಈ ಕುರಿತು ಮಹತ್ವದ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಕರ್ನಾಟಕ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಹನುಮಂತಪ್ಪ ಮೇಡೇಗಾರ್ ಅವರು ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಹಾಗೂ ಕನ್ನಡ ಬಾವುಟಗಳನ್ನು ಮನೆ ಮನೆಗೂ ಹಂಚುವುದರ ಮೂಲಕ ಕಾರ್ಯಕ್ರಮಕ್ಕೆ ಶೋಭೆ ತಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಲೋಕೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಲಾಯಿತು.
ಶರಣಯ್ಯ ಜಡೀಮಠ, ಸುರೇಶ್ ಬಿರಾದಾರ್, ರೇಣುಕಾ ಗೊಂಚಿಗಾರ್, ಬೊಮ್ಮನ ಜೋಗಿ, ಶಿಲ್ಪಾ ಹನುಮಂತಪ್ಪ ಮೇಡೇಗಾರ್ ಹನುಮಯ್ಯ, ಗಂಗಾಧರ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗಾಯಕ ಅಜೀಂ ಅಲಿಖಾನ್ ಅವರು ಕನ್ನಡದ ಲಾವಣಿಗಳನ್ನು ಹಾಡಿ ರಂಜಿಸಿದರೆ, ಗಾಯಕ ಶೇಖರ್ ಅವರು ಕನ್ನಡ ಭಾವಗೀತೆಗಳ ಗಾಯನ ನಡೆಸಿಕೊಟ್ಟರು.