ಬೆಂಗಳೂರು: ರೆಬೆಲ್ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು, ಬಂಡಾಯದ ಬಾವುಟ ಹಿಡಿದವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದೆ.
ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿರೂ ತೆರೆಮರೆಯಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇತ್ತ ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಸಹ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇನ್ನು ಕೆಲವು ನಾಯಕರು ಜೆಡಿಎಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆ ಪಕ್ಷದ ವರಿಷ್ಠರಾಗಿರುವ ದೇವೇಗೌಡರು ರೆಬೆಲ್ ನಾಯಕರ ವಿರುದ್ಧ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದಾರೆ.
ಯಾರೇ ಬಂಡಾಯ ಸಾರಿದರೂ ಇನ್ನು ಮುಂದೆ ಸಮಾಧಾನ ಮತ್ತು ಸಂಧಾನ ಮಾಡುವಂತಿಲ್ಲ. ಏನಾದರೂ ರೆಬೆಲ್ ಆದ್ರೆ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂಬ ಸಂದೇಶವನ್ನು ದೇವೇಗೌಡರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ರವಾನಿಸಿದ್ದಾರಂತೆ. ಜೆಡಿಎಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಉಳಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ, ಪುತ್ರ ಹೆಚ್.ಡಿ.ಕುಮಾರಸ್ವಾಮಿ ವಿದೇಶದಿಂದ ಬರುವದರಲ್ಲಿ ಎಲ್ಲ ಬಂಡಾಯವನ್ನು ಶಮನ ಮಾಡಲು ದೇವೇಗೌಡರು ನಿರ್ಧರಿಸಿದ್ದಾರೆ. ಬಂಡಾಯವನ್ನು ಶಮನಗೊಳಿಸಿ ಒಗ್ಗಟ್ಟಿನಿಂದ ಉಪ ಚುನಾವಣೆಯನ್ನು ಎದುರಿಸಲು ದೇವೇಗೌಡು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.