ಬೆಂಗಳೂರು,ನ.7- ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕ ಕುಸಿತಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ನ.11ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದು, ಅದರ ಪೂರ್ವ ಸಿದ್ದತಾ ಸಭೆ ನಡೆಸಲಾಯಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೆಂಗಳೂರು ನಗರದ ಕಾಂಗ್ರೆಸ್ನ ಮೂರು ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಕಳೆದ ವಿಧಾನಸಭೆಯಲ್ಲಿ ಸ್ಪರ್ಧಿಸಿದವರು, ಸಂಸದರು, ಮಾಜಿ ಸಂಸದರು, ರಾಜ್ಯ ಸಭಾ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಕೇಂದ್ರ ಸರ್ಕಾರದ ಸಹಿ ಹಾಕದೆ ಹಿಂದೆ ಸರಿದಿದೆ. ಆದರೆ ಮುಂದಿನ ದಿನಗಳಲ್ಲಿ ಈ ಒಪ್ಪಂದ ಮರು ಜಾರಿಯಾಗುವ ಆತಂಕವಿದೆ. ಹಾಗಾಗಿ ಈಗಾಗಲೇ ಒಪ್ಪಂದದ ವಿರುದ್ಧ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಲಾಗುತ್ತಿದೆ.
ಸೋಮವಾರ ಬೃಹತ್ ಪ್ರತಿಭಟನೆಯನ್ನು ನಗರದಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದಿನೇಶ್ ಗುಂಡೂರಾವ್ ಸಭೆಯಲ್ಲಿ ಮನವಿ ಮಾಡಿದರು.
ರಾಜ್ಯ ಸರ್ಕಾರ ನೆರೆ ಮತ್ತು ಬರ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿತಗೊಂಡಿದ್ದು, ಕೇಂದ್ರ ಸರ್ಕಾರ ಆರ್ಥಿಕ ಸುಧಾರಣೆಯತ್ತ ಗಮನಹರಿಸದೆ ಅನಗತ್ಯವಾದ ವಿವಾದಗಳಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.