ಜನರ ಋಣ ತೀರಿಸಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ನ.7-ದೋಷಾರೋಪಣ ಪಟ್ಟಿ ಸಲ್ಲಿಸದ ಹೊರತು  ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಯಾರೂ ಜಾಮೀನು ಪಡೆದು ಹೊರಬಂದಿರುವ ಉದಾಹರಣೆ ಇಲ್ಲ. ನಾನು ಬಿಡುಗಡೆಯಾಗಿದ್ದೇನೆ ಎಂದರೆ ಅದಕ್ಕೆ ಜನರ ಪ್ರಾರ್ಥನೆ ಮತ್ತು ದೇವರ ಆಶೀರ್ವಾದವೇ ಕಾರಣ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಿಂದ ಪ್ರಯಾಣ ಮಾಡಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರ ಋಣ ತೀರಿಸಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

ನಾನು ಜೈಲಿನಲ್ಲಿದ್ದಾಗ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಪ್ರಾರ್ಥನೆ ಮಾಡಿದ್ದಾರೆ, ಪೂಜೆ ಮಾಡಿದ್ದಾರೆ, ಪ್ರತಿಭಟನೆ ಮಾಡಿದ್ದಾರೆ.ಪ್ರತಿದಿನ ಬಾಕ್ಸ್ ಗಟ್ಟಲೇ ಪ್ರಸಾದಗಳು ಡೆಲ್ಲಿಗೆ ಬರುತ್ತಿದ್ದವು.ರಾಜ್ಯದಲ್ಲಷ್ಟೇ ಅಲ್ಲ ತಮಿಳುನಾಡು, ಕೇರಳದಲ್ಲೂ ಕೂಡ ಪ್ರತಿಭಟನೆಗಳಾಗಿವೆ. ಯಾವ ದೊಡ್ಡ ನಾಯಕರು ಸಂಘಟನೆ ಮಾಡದಿದ್ದರೂ ಸ್ವಪ್ರೇರಣೆಯಿಂದ ಜನ ಬಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದರು.

ನನ್ನ ಪರವಾಗಿ ಪ್ರತಿಭಟನೆ ನಡೆಸಬಾರದು ಎಂದು ಪೆÇಲೀಸ್ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದರೂ ಜನ ಲೆಕ್ಕಿಸಿಲ್ಲ. ಕರವೇ ನಾರಾಯಣಗೌಡರನ್ನು ಬೆದರಿಸುವ ಕೆಲಸವೂ ನಡೆದಿತ್ತು. ಡಿ.ಕೆ.ಶಿವಕುಮಾರ್ ಅವರಿಗೆ ಅನ್ಯಾಯವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡ ಜನ ಯಾವುದನ್ನೂ  ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಪ್ರಾರ್ಥನೆ ಮಾಡಿದರು. ಅದರ ಫಲವಾಗಿ ನಾನು  ದೋಷಾರೋಪಣ ಪಟ್ಟಿ ಸಲ್ಲಿಕೆಯಾಗುವ ಮೊದಲೇ ಬಿಡುಗಡೆಯಾಗಿದ್ದೇನೆ ಎಂದರು.

ಡಿ.ಕೆ.ಶಿವಕುಮಾರ್ ಮಠಕ್ಕೆ ಸೇರಿಕೊಳ್ಳಬೇಕು ಎಂದು ಕೆಲವರು ವ್ಯಾಖ್ಯಾನ ಮಾಡಿದ್ದಾರೆ.ನಾನು ಮಠಕ್ಕೆ ಸೇರಿಕೊಳ್ಳುವುದಿಲ್ಲ. ಎಲ್ಲ ಮಠಗಳ ಆಶೀರ್ವಾದ ನನ್ನ ಮೇಲಿದೆ. ಜಾತಿಬೇಧವಿಲ್ಲದೆ ಧರ್ಮಗುರುಗಳು ನನಗೆ  ಆಶೀರ್ವಾದ ಮಾಡಿದ್ದಾರೆ. ಶಿವಕುಮಾರ್ ಸ್ವಾಮೀಜಿಯವರ ಸನ್ನಿಧಿಗೆ ಭೇಟಿ ನೀಡಿದ್ದೇನೆ,  ಶ್ರೀ ನಂಜಾವಧೂತ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ನಾಳೆ ಸುತ್ತೂರಿಗೆ ಭೇಟಿ ಕೊಡುತ್ತೇನೆ. ಮುಂದೆ ಉತ್ತರ ಕರ್ನಾಟಕದಲ್ಲಿರುವ ಮಠಗಳಿಗೂ ಭೇಟಿ ಕೊಡುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಯಾರಿಗೆ ಎಷ್ಟು ಗೌರವ ಕೊಡಬೇಕೊ ಅಷ್ಟನ್ನು ಗೌರವ ಕೊಡುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದಾರೆ.ವಿಪಕ್ಷದಲ್ಲಿರುವಂತಹ ನಮ್ಮಂಥ ನಾಯಕರುಗಳನ್ನು ಅವರು ಕಳೆದುಕೊಳ್ಳುತ್ತಿದ್ದಾರೆ ಎಂಬುದೇ ಹೊಟ್ಟೆಉರಿ. ವಿಪಕ್ಷ  ಪ್ರಬಲವಾಗಿದ್ದರೆ ಮಾತ್ರ ಆಡಳಿತ ಪಕ್ಷ ಪ್ರಬಲವಾಗಿರಲು ಸಾಧ್ಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ