ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು-ಘಟನೆಯಲ್ಲಿ ಮಹಿಳೆಯೊಬ್ಬರ ಸಾವು

ಬೆಂಗಳೂರು, ನ.7- ಮದುವೆ ಸಮಾರಂಭ ಮುಗಿಸಿಕೊಂಡು ಕುಟುಂಬವೊಂದು ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಆಡುಗೋಡಿ ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನ್ನೇರುಘಟ್ಟ ರಸ್ತೆ, ಲಕ್ಷ್ಮೀಪುರದ ನಿವಾಸಿ ಜಾನಕಮ್ಮ (70) ಮೃತಪಟ್ಟ ಮಹಿಳೆ.

ನಗರದಲ್ಲಿದ್ದಂತಹ ಮದುವೆ ಸಮಾರಂಭಕ್ಕೆ ನಿನ್ನೆ ಬೆಳಗ್ಗೆ ಲಕ್ಷ್ಮೀಪುರದಿಂದ ಜಾನಕಮ್ಮ ಕುಟುಂಬದವರೆಲ್ಲಾ ಕಾರಿನಲ್ಲಿ ಬಂದಿದ್ದರು.ನಂತರ ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು.

ಜಾನಕಮ್ಮ ಅವರ ಮಗ ಕಾರು ಚಲಾಯಿಸುತ್ತಿದ್ದರು. ಲಕ್ಕಸಂದ್ರದ ಡೈರಿ ಸರ್ಕಲ್ ಸಮೀಪ ಸಂಜೆ 4.30ರ ಸುಮಾರಿನಲ್ಲಿ ಬರುತ್ತಿದ್ದಂತೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಕಾರಿನಲ್ಲಿದ್ದ ಜಾನಕಮ್ಮ ಗಂಭೀರ ಗಾಯಗೊಂಡರು. ತಕ್ಷಣ ಗಾಯಾಳು ಜಾನಕಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಆಡುಗೋಡಿ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ