ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷ ಗಮನ-ಕೆಲವು ಶಾಸಕರ ಅಸಮಾಧಾನ

ಬೆಂಗಳೂರು, ನ.7- ಅನರ್ಹ ಶಾಸಕರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಗಮನ ನೀಡಿ ಅನುದಾನ ನೀಡುತ್ತಿರುವುದು ಸ್ವಪಕ್ಷೀಯರ ಕಣ್ಣು ಕೆಂಪಾಗುವಂತೆ ಮಾಡಿದೆ.

ನಮ್ಮ ಕ್ಷೇತ್ರಗಳನ್ನು ಕಡೆಗಣಿಸಿ ಮುಖ್ಯಮಂತ್ರಿಗಳು ಕಾಂಗ್ರೆಸ್- ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ರೀತಿಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರೇ ಅಸಮಾಧಾನಗೊಂಡಿದ್ದಾರೆ.

ನಾವು ಅನರ್ಹರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಯಾವುದೇ ರೀತಿಯ ತಕರಾರು ವ್ಯಕ್ತಪಡಿಸುವುದಿಲ್ಲ. ಆದರೆ, ನಮ್ಮ ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡಿ ಅವರ ಕ್ಷೇತ್ರಗಳಿಗೆ ವಿಶೇಷ ಗಮನ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ನೂರಾರು ಕೋಟಿ ಬಿಡುಗಡೆ ಮಾಡುತ್ತಿದ್ದಾರೆ.ಆದರೆ, ನಮ್ಮ ಕ್ಷೇತ್ರಗಳಿಗೆ ಅನುದಾನ ಕೇಳಿದರೆ ಅಧಿಕಾರಿಗಳ ಮೂಲಕ ಕೊಕ್ಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನೊಂದ ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಯಡಿಯೂರಪ್ಪನವರ ಪಕ್ಷಪಾತ ಧೋರಣೆ ವಿರುದ್ಧ ದೂರು ನೀಡಿದ್ದಾರೆ.

ಶಾಸಕರ ಮನವಿಗೆ ಸ್ಪಂದಿಸಿರುವ ಪಕ್ಷದ ಪ್ರಮುಖರು ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಪಕ್ಷದ ಕಚೇರಿಗೆ ಆಹ್ವಾನಿಸಿ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಈಗಾಗಲೇ ಸಿಎಂ ಜತೆ ಅನೌಪಚಾರಿಕವಾಗಿ ಮಾತನಾಡಿರುವ ಕಟೀಲ್, ನಮ್ಮ ಪಕ್ಷದ ಶಾಸಕರ ಮನವಿಗೆ ಸ್ಪಂದಿಸಬೇಕು.ಅವರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗೆ ಚಾಲನೆ ನೀಡುವುದು, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಾವುದೇ ವಿಷಯದಲ್ಲೂ ಹಸ್ತಕ್ಷೇಪ ಮಾಡದಂತೆ ಶಾಸಕರ ಬೇಡಿಕೆಗಳನ್ನು ತತ್‍ಕ್ಷಣವೇ ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ  ಪಕ್ಷದ ಕಚೇರಿಯಲ್ಲಿ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ ಕೆಲ ಬಿಜೆಪಿ ಶಾಸಕರು, ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್.ಪೇಟೆ, ಹಿರೇಕೆರೂರು, ರಾಣೆಬೆನ್ನೂರು, ಅಥಣಿ, ಗೋಕಾಕ್, ಕಾಗವಾಡ, ಬೆಂಗಳೂರಿನ ಮಹಾಲಕ್ಷ್ಮಿಲೇಔಟ್, ಕೆ.ಆರ್.ಪುರಂ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನರ್ಹ ಶಾಸಕರು ಎಷ್ಟೇ ಅನುದಾನ ಕೇಳಿದರೂ ಯಾವುದಕ್ಕೂ ಇಲ್ಲ ಎನ್ನದೆ ಸಿಎಂ ಯಥೇಚ್ಛವಾಗಿ ಹಣ ಬಿಡುಗಡೆ ಮಾಡುತ್ತಿದ್ದಾರೆ.

ಮುಂದಿನ ಅವಧಿವರೆಗೂ ಸರ್ಕಾರ ಸುಭದ್ರವಾಗಿರಲು ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಅಗತ್ಯ ಎಂಬುದು ನಮಗೂ ಗೊತ್ತು.ಅನರ್ಹ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ನಮ್ಮ ಕ್ಷೇತ್ರಗಳನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕರು ಅಧ್ಯಕ್ಷರ ಬಳಿ ನೋವು ತೋಡಿಕೊಂಡಿದ್ದಾರೆ.

ಹೊಸಕೋಟೆಗೆ 150 ಕೋಟಿ, ಹಿರೇಕೆರೂರು, ರಾಣೆಬೆನ್ನೂರಿಗೆ ತಲಾ 100ಕೋಟಿ, ಚಿಕ್ಕಬಳ್ಳಾಪುರಕ್ಕೆ 100 ಹಾಗೂ ವೈದ್ಯಕೀಯ ಕಾಲೇಜು ಮಂಜೂರು, ಕೆ.ಆರ್.ಪೇಟೆ ಮತ್ತು ಹುಣಸೂರಿಗೂ ಭಾರೀ ಪ್ರಮಾಣದ ಅನುದಾನ ನೀಡಲಾಗಿದೆ. ನಾವು ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೇಳಿದರೆ ಅಧಿಕಾರಿಗಳ ಮೂಲಕ ತಡೆಹಿಡಿಯುವ ಕೆಲಸ ನಡೆಯುತ್ತಿದೆ.ಇದು ಸರಿಯಾದ ಕ್ರಮ ಅಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷಪಾತ ಧೋರಣೆ ಅನುಸರಿಸಿದ್ದರಿಂದ ಕೆಲವು ಶಾಸಕರು ರಾಜೀನಾಮೆ ನೀಡಿ ಸರ್ಕಾರವನ್ನೇ ಪತನಗೊಳಿಸಿದರು.ನಮ್ಮಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದು ಬೇಡ.ಶಾಸಕರ ದೂರು ದುಮ್ಮಾನಗಳು, ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ.ಆದರೆ, ಅವರ ಹಿಂದೆ-ಮುಂದೆ ಇರುವ ಹಿಂಬಾಲಕರು ಪ್ರತಿಯೊಂದಕ್ಕೂ ಕ್ಯಾತೆ ತೆಗೆಯುತ್ತಾರೆ.ಇದಕ್ಕೆ ಅವಕಾಶ ಕೊಡಬಾರದು ಎಂದು ಶಾಸಕರು ಮನವಿ ಮಾಡಿಕೊಂಡಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ವಾರ ಖುದ್ದು ಯಡಿಯೂರಪ್ಪನವರೇ ಶಾಸಕರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದು, ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ