ಬೆಂಗಳೂರು,ನ.7- ಮುಖ್ಯಮಂತ್ರಿಗಳಿಗೆ ಶೂನ್ಯ ಸಂಚಾರ ವ್ಯವಸ್ಥೆ ಇದ್ದರೂ ಕೂಡ ಇಂದು ಸಿಎಂ ಬೆಂಗಾವಲು ವಾಹನಕ್ಕೆ ಸೈಕಲ್ ಸವಾರನೊಬ್ಬ ಅಡ್ಡಬಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಹಾವೇರಿ ಪ್ರವಾಸಕ್ಕಾಗಿ ಜಕ್ಕೂರು ಏರೋಡ್ರಂಗೆ ತೆರಳಲು ಸಿಎಂ ಧವಳಗಿರಿ ನಿವಾಸದಿಂದ ಹೊರಡುತ್ತಿದ್ದಂತೆ ರಸ್ತೆಯಂಚಿನಲ್ಲಿ ಮನವಿ ಪತ್ರ ಹಿಡಿದು ವ್ಯಕ್ತಿಯೊಬ್ಬ ನಿಂತಿದ್ದ. ಇದನ್ನು ಗಮನಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಡ್ರೈವರ್ಗೆ ಕಾರು ನಿಲ್ಲಿಸಲು ಸೂಚನೆ ನೀಡಿದರು.
ಆ ವ್ಯಕ್ತಿಯನ್ನು ಕರೆಸಿಕೊಂಡು ಸಮಸ್ಯೆ ಆಲಿಸಿ ಮನವಿ ಪತ್ರ ಸ್ವೀಕರಿಸಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸಿಎಂ ಬೆಂಗಾವಲು ವಾಹನ ಹೊರಡುತ್ತಿದ್ದಂತೆ ಇಡೀ ರಸ್ತೆಯಲ್ಲಿ ಶೂನ್ಯ ಸಂಚಾರ ವ್ಯವಸ್ಥೆ ಇದ್ದರೂ ಏಕಾಏಕಿ ಶರವೇಗದಲ್ಲಿ ಸೈಕಲ್ ಸವಾರನೊಬ್ಬ ಸಿಎಂ ಕಾರಿನ ಮುಂದಿನಿಂದಲೇ ಹಾದು ಹೋಗಿದ್ದಾನೆ.
ನಿವಾಸದ ಸಮೀಪ ತಿರುವಿದ್ದ ಕಾರಣ ಸಿಎಂ ಬೆಂಗಾವಲು ವಾಹನ ನಿಧಾನಕ್ಕೆ ಚಲಿಸಿದ್ದರಿಂದ ಸೈಕಲ್ ಸವಾರ ಅಪಾಯದಿಂದ ಪಾರಾಗಿದ್ದಾನೆ.ಸಿಎಂ ನಿರ್ಗಮನದ ನಂತರ ಈ ಸೈಕಲ್ ಸವಾರ ಎಲ್ಲಿದ್ದ, ಎಲ್ಲಿಂದ ಬಂದ, ಖಾಲಿ ರಸ್ತೆಯಲ್ಲಿ ಸ್ವಲ್ಪವೂ ಗೊತ್ತಾಗದಂತೆ ಹೇಗೆ ನುಸುಳಿದ ಎಂದು ಪೋಲೀಸರು ಯೋಚಿಸತೊಡಗಿದರು.