ಬೆಂಗಳೂರು,ನ.೫- ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ತೀರ್ಪು ಯಾವುದೇ ರೀತಿ ಬಂದರೂ ಶಾಂತಿ ಸೌಹಾರ್ದತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನ.೭ರಂದು ಸಂಜೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಾಂತಿದೀಪ(ಕ್ಯಾಂಡಲ್ಲೈಟ್) ಜಾಥಾ ಹಮ್ಮಿಕೊಂಡಿರುವುದಾಗಿ ಶಾಂತಿ ಮತ್ತು ನ್ಯಾಯಕ್ಕಾಗಿ ನಾವು ವೇದಿಕೆಯ ಅಧ್ಯಕ್ಷ ವೀರಸಂಗಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಲಿದ್ದು ಎಲ್ಲೆಡೆ ಶಾಂತಿ ಕಾಪಾಡುವ ಅಗತ್ಯವಿದೆ. ತೀರ್ಪು ಯಾವುದೇ ರೀತಿ ಬರಲಿ ಯಾರು ಉದ್ವೇಗಕ್ಕೊಳಗಾಗಬಾರದು ಎಂದು ಮನವಿ ಮಾಡಿದರು.
ಅಯೋಧ್ಯೆ ವಿವಾದ ಕುರಿತು ಒಂದೆರಡು ದಿನದಲ್ಲಿ ತೀರ್ಪು ಪ್ರಕಟವಾಗಲಿದೆ. ಎಲ್ಲೆಡೆ ಶಾಂತಿಭಂಗವಾಗದಂತೆ ನೋಡಿಕೊಳ್ಳುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪೊಲೀಸರು ಶಾಂತಿಗೆ ಭಂಗವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಪ್ರಗತಿಪರ ಸಂಘಟನೆಗಳ ಮುಖಂಡರನ್ನೊಳಗೊಂಡ ನಿಯೋಗ, ಶಾಂತಿ ಸೌಹಾರ್ದತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಲಿದೆ ಎಂದು ವೀರಸಂಗಯ್ಯ ತಿಳಿಸಿದರು.