ರಾಜ್ಯ ಸರ್ಕಾರ ೧೦೦ ದಿನದ ಆಡಳಿತದಲ್ಲಿ ವಿಫಲ-ಮಾಜಿ ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು,ನ.೫-ರಾಜ್ಯ ಸರ್ಕಾರ ೧೦೦ ದಿನದ ಆಡಳಿತದಲ್ಲಿ ವಿಫಲವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬದವರನ್ನು ಬೈಯ್ಯುವವರಿಗೆ, ಟೀಕಿಸುವವರಿಗೆ ಗಿಪ್ಟ್ ಕೊಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ಸುದ್ದಿಗೊಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅಧಿಕಾರ ವಹಿಸಿಕೊಂಡಾಗ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ  ಜೆಡಿಎಸ್ ಶಾಸಕರ ಕ್ಷೇತ್ರಗಳ  ಕಾಮಗಾರಿಗಳಿಗೆ ತಡೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಹುಕೋಟಿ ವಂಚನೆಯ ಆರೋಪದ ಐಎನ್‌ಎ ಸಂಸ್ಥೆಯಡಿ ೧೬ ಸಂಸ್ಥೆಗಳು ಬರುತ್ತವೆ. ಅದರಲ್ಲಿ ಐಎನ್‌ಎ ಹೌಸಿಂಗ್ ಸೊಸೈಟಿ, ಐಎನ್‌ಎ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಐಎನ್‌ಎ   ಸೊಸೈಟಿಯಲ್ಲಿ ಸುಮಾರು  ಒಂದೂವರೆ ಸಾವಿರ ಕೋಟಿ ರೂ.ನಷ್ಟು ಸಾರ್ವಜನಿಕರ ಹಣ ವಂಚನೆಯಾಗಿರುವ ಆರೋಪವಿದೆ.  ಈ ಆರೋಪದ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ.

ಪ್ರತಿ ತಿಂಗಳು ಸಹಕಾರ ಇಲಾಖೆಯ ಎಂಎಂಆರ್ ಸಭೆ ನಡೆಯುತ್ತದೆ.ಆ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಏನು ಕ್ರಮ ಕೈಗೊಂಡಿದ್ದಾರೆ. ಅವರು ಕಣ್ಣುಮುಚ್ಚಿ ಕುತಿದ್ದಾರಾ  ಎಂದು ಪ್ರಶ್ನಿಸಿದರು.

ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸಂಘ, ಕಣ್ವ ಸೌಹಾರ್ದ ಸಹಕಾರಿ ಸಂಘಗಳ ಬಗ್ಗೆಯೂ ವಂಚನೆ ಆರೋಪವಿದ್ದುಘಿ, ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರೇವಣ್ಣ ಪ್ರಶ್ನಿಸಿದರು.

ಸಹಕಾರಿ ಇಲಾಖೆಯಡಿ ಬರುವ ಸಂಸ್ಥೆಗಳ  ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿದೆ   ಎನ್ನಲಾದ ಅವ್ಯವಹಾರಗಳ  ಬಗ್ಗೆ ಸಹಕಾರ  ಸಂಘಗಳ ಕಾಯ್ದೆ ೧೯೫೯ರ ಕಲಂ ೬೪ರಡಿ ವಿಚಾರಣೆಗೆ ಆದೇಶಿಸಿದ ಅಧಿಕಾರಿಯನ್ನು ಬೀದರ್‌ಗೆ ವರ್ಗಾಯಿಸಲಾಗಿದೆ. ಅವ್ಯವಹಾರವನ್ನು ಮುಚ್ಚಿ ಹಾಕುವ ಉದ್ದೇಶದಿಂದ ನರಸಿಂಹಮೂರ್ತಿ  ಎಂಬುವರನ್ನು ಸಹಕಾರಿ ಸಂಘಗಳ ಜಂಟಿ ನಿಬಂಧಕರ  ಹುದ್ದೆಗೆ ನೇಮಿಸಲಾಗಿದೆ ಎಂದು ಆಪಾದಿಸಿದರು.

ಅಪೆಕ್ಸ್ ಬ್ಯಾಂಕ್‌ನ ಉದ್ಯೋಗಿ ಕಶ್ಯಪ್ ಎಂಬುವರು ೯ ಕೋಟಿ ರೂ. ಹಣವನ್ನು ತಮ್ಮ ಖಾತೆಗೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

೨೭ ಸಹಕಾರಿ ಮತ್ತು ಸಹಕಾರೇತರ ಸಕ್ಕರೆ ಕಾರ್ಖಾನೆಗಳಿಗೆ ೧೫೦೦ರಿಂದ ೨೦೦೦ ಕೋಟಿ ರೂ.ಗಳನ್ನು ಯಾವುದೇ ಭದ್ರತೆ   ಇಲ್ಲದೆ ನೀಡಲಾಗಿದೆ.೨೦೧೩ರಿಂದ ೨೦೧೮ರ ನಡುವಿನ ಅವಧಿಯಲ್ಲಿ ಸುಮಾರು ೬೦ರಿಂದ ೮೦ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂಬುದು ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.

 ಹಸು ಆಹಾರ ತಯಾರಿಕೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಬೆಂಬಲ ಖರೀದಿಗೆ ಖರೀದಿಸಲು ಕೆಟಿಟಿಪಿ ಕಾಯ್ದೆ ಕಲಂ ೪(ಜಿ)ನಡಿ ವಿನಾಯ್ತಿಗೆ ಪತ್ರ ಬರೆದಿದ್ದರೂ ಮುಖ್ಯಮಂತ್ರಿ ಅವಕಾಶ ನೀಡಿಲ್ಲಘಿ. ಆದರೆ ಕೆಆರ್‌ಪೇಟೆಯ ಅನರ್ಹ ಶಾಸಕ ನಾರಾಯಣ ಗೌಡರ ಕ್ಷೇತ್ರದ ೧೦ ಕೋಟಿ ರೂ. ಕಾಮಗಾರಿಗೆ ೪(ಜಿ) ವಿನಾಯ್ತಿ ನೀಡಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಕಾವೇರಿ ಜಲಾನಯನ ಭಾಗದ ಸುಮಾರು ೭,೬೬೦ ಕೋಟಿ ರೂ. ನೀರಾವರಿ ಇಲಾಖೆಯ ಕಾಮಗಾರಿಗಳಿಗೆ ಸಿಎಂ ತಡೆ  ನೀಡಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಕ್ಷೇತ್ರದ ಅನುದಾನಕ್ಕೂ ಮುಖ್ಯಮಂತ್ರಿ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರು  ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲಿ. ಜೆಡಿಎಸ್, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಯೊಂದಿಗೆ  ಸಮಾನಾಂತರ ಕಾಯ್ದುಕೊಳ್ಳುತ್ತೇವೆ ಎಂದರು.

ಈ ಎರಡೂ ಪಕ್ಷದವರೂ ಕಳೆದ  ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದವು. ದೇವೇಗೌಡರ ಸೋಲಿನಿಂದ ಅವರಿಗೆ ನಷ್ಟವೇನು ಆಗಿಲ್ಲ. ಆದರೆ ರಾಜ್ಯದ ಜನರಿಗೆ ನಷ್ಟವಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ